ಹಾಸನ: ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನವಾಗಲು ಕಾಂಗ್ರೆಸ್ಸಿಗರೇ ಕಾರಣ ಎಂದು ಸಂಸದ ಪ್ರಜ್ವಲ್ ರೇವಣ್ಣ ಆರೋಪಿಸಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಕೆಲವರು ಮಂತ್ರಿಯಾಗುವ ಬಯಕೆಯಲ್ಲಿ ಹಣ ಪಡೆದು ಸರ್ಕಾರ ಬೀಳಿಸಿದ್ದಾರೆ. ಆದರೆ, ಸರ್ಕಾರ ಪತನಕ್ಕೆ ನಮ್ಮ ತಂದೆ ಎಚ್.ಡಿ.ರೇವಣ್ಣ ಅವರನ್ನು ಹೊಣೆಯಾಗಿಸಲಾಗುತ್ತಿದೆ ಎಂದು ದೂರಿದರು.
ಕೋತಿ ತಾನು ಮೊಸರು ತಿಂದು ಮೇಕೆ ಮೂತಿಗೆ ಒರೆಸಿತು ಎಂಬಂತೆ ಸರ್ಕಾರದ ಪತನಕ್ಕೆ ನಮ್ಮ ತಂದೆಯ ಮೇಲೆ ಗೂಬೆ ಕೂರಿಸಲಾಗುತ್ತಿದೆ. ಆದರೆ, ಸರ್ಕಾರ ಕೆಡವಿದ್ದು ಮಾತ್ರ ಕಾಂಗ್ರೆಸ್ಸಿಗರು. ಕೆಲವರು ವೈಯಕ್ತಿಕ ಕಾರಣಕ್ಕಾಗಿ ಸರ್ಕಾರ ಬೀಳಿಸಿದ್ದಾರೆ ಎಂದು ಪುನರುಚ್ಚರಿಸಿದರು. ಬಿ.ಎಸ್.ಯಡಿಯೂರಪ್ಪ ನೇತೃತ್ವ ಬಿಜೆಪಿ ಸರ್ಕಾರ ಅಲ್ಪಾಯುಷಿ ಎಂಬುದು ಮಾತ್ರ ನಿಜ. ಆದರೆ, ಎಷ್ಟುದಿನ ಇರುತ್ತದೆ ಎಂದು ಭವಿಷ್ಯ ಹೇಳಲು ತಾವು ಜ್ಯೋತಿಷಿಯಲ್ಲ ಎಂದು ಹೇಳಿದರು.
ಬಿಜೆಪಿಗೆ ಬಾಹ್ಯ ಬೆಂಬಲ ನೀಡುವ ಬಗ್ಗೆ ಕೆಲವು ಶಾಸಕರು ಹೇಳಿರಬಹುದು. ಅದು ಅವರ ವೈಯಕ್ತಿಕ ಅಭಿಪ್ರಾಯ. ಆದರೆ, ಸರ್ಕಾರಕ್ಕೆ ಯಾವುದೇ ರೀತಿಯ ಬೆಂಬಲ ನೀಡುವುದಿಲ್ಲ ಎಂದು ತಿಳಿಸಿದರು.
ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಾಗ ಸುಳ್ಳು ಪ್ರಮಾಣಪತ್ರ ಸಲ್ಲಿದ್ದೇನೆ ಎಂಬ ಆರೋಪದ ಕುರಿತು ಇದುವರೆಗೂ ಯಾವುದೇ ನೋಟಿಸ್ ಬಂದಿಲ್ಲ ಎಂದು ತಿಳಿಸಿದರು.