Wednesday, January 22, 2025
ಸುದ್ದಿ

ರಾಜ್ಯದಲ್ಲಿ ಭಾರಿ ಕೋಲಾಹಲ ಸೃಷ್ಠಿಸಿದ್ದ ಟಿಪ್ಪು ಜಯಂತಿ ರದ್ದು; ಸಿಎಂ ಬಿಎಸ್‍ವೈ ಸರ್ಕಾರ ಆದೇಶ – ಕಹಳೆ ನ್ಯೂಸ್

ಮೈಸೂರು ಹುಲಿ ಎಂದೇ ಕರೆಯಲಾಗುವ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯನ್ನು ರದ್ದುಗೊಳಿಸಿ ನೂತನ ಸಿಎಂ ಬಿ.ಎಸ್ ಯಡಿಯೂರಪ್ಪನವರು ಆದೇಶ ಹೊರಡಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ ಜಾರಿಗೊಳಿಸಿದ್ದ ಟಿಪ್ಪು ಜಯಂತಿ ಆಚರಣೆಯನ್ನು ಬಿಜೆಪಿ ಸರ್ಕಾರ ಬಂದ ಕೂಡಲೇ ರದ್ದುಗೊಳಿಸಿದೆ. ಮಾಜಿ ಸ್ಪೀಕರ್ ಬೋಪಯ್ಯನವರು ಟಿಪ್ಪು ಜಯಂತಿಯನ್ನು ರದ್ದುಗೊಳಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದರು. ಇದೀಗ ಬೋಪಯ್ಯನವರ ಮನವಿಗೆ ಸ್ಪಂದಿಸಿದ ಸಿಎಂ ಬಿ.ಎಸ್ ಯಡಿಯೂರಪ್ಪನವರು ಟಿಪ್ಪು ಜಯಂತಿ ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಿದ್ದ ಟಿಪ್ಪು ಜಯಂತಿಯನ್ನು ಹಿಂದಿನ ಸಿಎಂ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರವೂ ಮುಂದುವರೆಸಿತ್ತು. ಟಿಪ್ಪು ಜಯಂತಿ ಆಚರಣೆ ಕೈಬಿಡಬೇಕೆಂದು ಬಿಜೆಪಿ ಮುಖಂಡರು ಸರಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಆದರೆ, ಕರ್ನಾಟಕ ಸರ್ವಜನಾಂಗದ ಶಾಂತಿ ತೋಟ ಎಂದು ಕುವೆಂಪು ಹೇಳಿದ್ದಾರೆ. ಅದರಂತೆಯೇ ಟಿಪ್ಪು ಜಯಂತಿ ಆಚರಿಸಲಿದ್ದೇವೆ ಎಂದು ಸಮಜಾಯಿಷಿ ನೀಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬಿಜೆಪಿ ಸೇರಿದಂತೆ ಸಂಘಪರಿವಾರ ಮುಖಂಡರು ಟಿಪ್ಪು ಜಯಂತಿ ಆಚರಿಸದಂತೆ ಹಿಂದಿನಿಂದಲೂ ಸರ್ಕಾರಗಳ ಮೇಲೆ ಒತ್ತಡ ಹಾಕುತ್ತಲೇ ಇದ್ದರು. ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಿಸಿದರೆ ಅದಕ್ಕೆ ಪ್ರಬಲ ವಿರೋಧ ವ್ಯಕ್ತಪಡಿಸುವುದಾಗಿ ಬಿಜೆಪಿ ನಾಯಕರು ಹೇಳಿದ್ದರು. ಜೊತೆಗೆ ಟಿಪ್ಪು ಜಯಂತಿ ಗಲಭೆ ಆದಾಗ ಅದನ್ನ ರಾಜಕೀಯವಾಗಿ ಕಾಂಗ್ರೆಸ್ ಬಳಸಿಕೊಳ್ಳುತ್ತಿದೆ ಎಂದು ಜೆಡಿಎಸ್ ಅಸಮಾಧಾನ ಹೊರಹಾಕಿತ್ತು. ಆದರೆ, ಅದೇ ಜೆಡಿಎಸ್ ವಕ್ತಾರರು ಟಿಪ್ಪು ಜಯಂತಿಯನ್ನು ಮುಂದುವರಿಸಿದ್ದಾರೆ ಎಂದು ಕುಟುಕಿದ್ದರು.

ಆಚರಣೆ ವೇಳೆ ಭಾರೀ ಗಲಾಟೆ; ಸಾವು ನೋವು ಸಂಭವಿಸಿತ್ತು:
ಈ ಹಿಂದೆ ಮಡಿಕೇರಿಯ ಟಿಪ್ಪು ಜಯಂತಿ ವೇಳೆ ನಡೆದ ಘರ್ಷಣೆಯಲ್ಲಿ ವಿಎಚ್‍ಪಿ ಮುಖಂಡ ಕುಟ್ಟಪ್ಪ ಮೃತಪಟ್ಟ ಬಳಿಕ ಮಡಿಕೇರಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿತ್ತು. ತಿಮ್ಮಯ್ಯ ಸರ್ಕಲ್‍ನಲ್ಲಿ ಟಿಪ್ಪುವಿನ ಪರ-ವಿರೋಧಿ ಜನರ ನಡುವೆ ನಡೆದ ಘರ್ಷಣೆಯಲ್ಲಿ ತೀವ್ರ ಗಾಯಗೊಂಡ ಕುಟ್ಟಪ್ಪ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.

ಟಿಪ್ಪು ಜಯಂತಿ ಆಚರಣೆಯಲ್ಲಿ ಸಂಭವಿಸಿದ ಸಾವುಗಳಿಗೆ ಬಿಜೆಪಿ ಮುಖಂಡರು ತೀವ್ರ ಖಂಡನೆ ವ್ಯಕ್ತಪಡಿಸಿದರು. ಮಡಿಕೇರಿಯ ಘಟನೆಗೆ ರಾಜ್ಯ ಸರ್ಕಾರವೇ ಹೊಣೆಯಾಗಿದೆ. ಇದಕ್ಕೆ ಅಂದಿನ ಸಿಎಂ ಸಿದ್ದರಾಮಯ್ಯ ಅವರ ತಪ್ಪು ನಿರ್ಧಾರವೇ ಕಾರಣವಾಗಿದೆ. ಸರ್ಕಾರ ವೋಟ್‍ಗಳಿಗಾಗಿ ಹಠಕ್ಕೆ ಬಿದ್ದು ಟಿಪ್ಪು ಜಯಂತಿಯನ್ನು ಆಚರಿಸುತ್ತಿದೆ. ಇದರಿಂದ ಹಲವು ಹಿಂದೂಗಳನ್ನು ಕಳೆದುಕೊಂಡಿದ್ದೇವೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.