ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಶಿರಾಡಿಘಾಟಿ ಪ್ರದೇಶದಲ್ಲಿ ಮೂವರು ನಕ್ಸಲರು ಕಾಣಿಸಿಕೊಂಡಿದ್ದಾರೆ.
ಶಿರಾಡಿಯ ಅಡ್ಡಹೊಳೆ ಅರಣ್ಯ ವ್ಯಾಪ್ತಿಯ ಮಿತ್ತಮಜಲು ಎಂಬಲ್ಲಿ ರಾತ್ರಿ 7.30ರ ಸುಮಾರಿಗೆ ಶಸ್ತ್ರಧಾರಿ ನಕ್ಸಲರು ಪರಿಸರದ ಮನೆಗಳಿಗೆ ಭೇಟಿ ನೀಡಿದ್ದಾರೆ. ಓರ್ವ ಮಹಿಳೆ ಹಾಗೂ ಇಬ್ಬರು ಪುರುಷರಿದ್ದ ತಂಡ ಲೀಲಾ ಎಂಬವರ ಮನೆಗೆ ಆಗಮಿಸಿ ತಾವು ಕಾಡಿನಲ್ಲಿರುವ ನಕ್ಸಲರಾಗಿದ್ದು ತುಂಬಾ ಹಸಿವಿನಿಂದ ಇದ್ದೇವೆ. ಹೀಗಾಗಿ ಆಹಾರ ತಯಾರಿಸಿಕೊಡುವಂತೆ ವಿನಂತಿಸಿದ್ದಾರೆ. ಅಲ್ಲದೆ ತಮ್ಮಲ್ಲಿದ್ದ ಮೊಬೈಲ್, ಲ್ಯಾಪ್ ಟಾಪ್ ಚಾರ್ಜ್ ಮಾಡಿದ್ದಾರೆ.
ಮನೆಯಲ್ಲಿ ಅಕ್ಕಿ ಹಿಟ್ಟು ಮಾಡಿದ್ದನ್ನು ಕಂಡು ದೋಸೆ ಮಾಡಿಕೊಡುವಂತೆ ವಿನಂತಿಸಿ, ದೋಸೆ ಮಾಡಿ ತಿಂದಿದ್ದಾರೆ. ಪರಿಸರದ ಬೇರೆ ಮನೆಗಳಿಗೂ ಭೇಟಿ ನೀಡಿದ್ದು ಅಕ್ಕಿ, ಸಕ್ಕರೆ, ತರಕಾರಿ ಕೇಳಿ ಪಡೆದು ರಾತ್ರಿಯೇ ಕಾಡಿನಲ್ಲಿ ಕಣ್ಮರೆಯಾಗಿದ್ದಾರೆ.
ತಂಡದ ಸದಸ್ಯರು ಮಲಯಾಳಂ, ತಮಿಳು, ತುಳು ಮಾತನಾಡುತ್ತಿದ್ದರು. ನಕ್ಸಲರು ಬಂದ ವಿಚಾರ ತಡವಾಗಿ ಬೆಳಕಿಗೆ ಬಂದಿದ್ದು, ಉಪ್ಪಿನಂಗಡಿ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ದೃಢಪಡಿಸಿದ್ದಾರೆ. ದಕ್ಷಿಣ ಕನ್ನಡ ಎಸ್‍ಪಿ ಸುಧೀರ್ ರೆಡ್ಡಿ ಸ್ಥಳಕ್ಕೆ ತೆರಳಿದ್ದು ಇಂದು ಬೆಳಗ್ಗಿನಿಂದ ಎಎನ್‍ಎಫ್ ಪಡೆ ಕೂಂಬಿಂಗ್ ಆರಂಭಿಸಲಿದೆ.
ಈ ಹಿಂದೆ ಅಂದರೆ 2012ರಲ್ಲಿ ಪುಷ್ಪಗಿರಿ, ಆನೆ ಕರಿಡಾರ್ ನಂತಹ ವಿಷಯಗಳನ್ನು ಕೈಗೆತ್ತಿಕೊಂಡು ಜನರ ವಿಶ್ವಾಸ ಗಳಿಸಲು ನಕ್ಸಲರು ಸುಬ್ರಹ್ಮಣ್ಯ ಸಮೀಪದ ಪಳ್ಳಿಗದ್ದೆಯಲ್ಲಿ ಓಡಾಡಿದ್ದರು. ಚೇರು, ಭಾಗ್ಯ, ಎರ್ಮಾಯಿಲ್ ನಡುತೋಟ ಮುಂತಾದ ಕಡೆಗಳಲ್ಲೂ ಕಾಡಿನಂಚಿನ ಮನೆಗಳಿಗೆ ಬಂದು ಆಹಾರ ಸಾಮಗ್ರಿ ಸಾಗಿಸಿದ್ದರು.
ಬೇರೆ ಕಡೆಗಳಲ್ಲಿನ ನಕ್ಸಲರ ಮೂಲ ಕಂಡುಕೊಳ್ಳಲು ವಿಫಲರಾಗಿದ್ದ ಎಎನ್‍ಎಫ್ ಸಿಬ್ಬಂದಿಗೆ ಪಳ್ಳಿಗದ್ದೆಗೆ ನಕ್ಸಲರು ಬಂದಿದ್ದು ಪ್ರಬಲ ಪುರಾವೆಯಾಗಿ ದೊರೆತಿತ್ತು. ನಕ್ಸಲರ ಜಾಡು ಹಿಡಿದ ಯೋಧರು, ಬಿಸಿಲೆ ಸಮೀಪ ಎನ್‍ಕೌಂಟರ್ ನಡೆಸಿ ಎಲ್ಲಪ್ಪ ಎಂಬಾತನನ್ನು ಕೊಂದು ಹಾಕಿದ್ದರು.