ಹುಬ್ಬಳ್ಳಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಕೃಷ್ಣಾ, ದೂದಗಂಗಾ, ವೇದಗಂಗಾ, ಪಂಚಗಂಗಾ, ಘಟಪ್ರಭಾ, ಮಲಪ್ರಭಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಬೆಳಗಾವಿ ಜಿಲ್ಲೆಯಲ್ಲಿ 14 ವರ್ಷಗಳ ಹಿಂದಿನ ಪ್ರವಾಹ ಮರುಕಳಿಸುವ ಭೀತಿ ಎದುರಾಗಿದೆ. ಹೀಗಾಗಿ, ನದಿ ಪಾತ್ರದ 37 ಗ್ರಾಮಗಳು ಜಲಾವೃತವಾಗುವ ಆತಂಕ ಎದುರಿಸುತ್ತಿದ್ದು, ರಾಯಬಾಗ ತಾಲೂಕಿನ ಮೂರು, ಚಿಕ್ಕೋಡಿ ತಾಲೂಕಿನ ಒಂದು ಗ್ರಾಮಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ. 15 ಸೇತುವೆಗಳು ಮುಳುಗಡೆಯಾಗಿವೆ.
ಕೃಷ್ಣಾ ನದಿಯ ಉಗಮಸ್ಥಾನ ಮಹಾಬಳೇಶ್ವರ, ವಾರಣಾ, ನವಜಾ, ರಾಧಾನಗರಿ ಮತ್ತು ಪಾಟಗಾಂವ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿದ್ದು, ದೂಧಗಂಗಾ ನದಿಗೆ ಹರಿದು ಬರುತ್ತಿದ್ದ ನೀರಿನ ಪ್ರಮಾಣ 29 ಸಾವಿರ ಕ್ಯೂಸೆಕ್‍ನಿಂದ ಶುಕ್ರವಾರ 33 ಸಾವಿರ ಕ್ಯೂಸೆಕ್ ದಾಟಿದೆ. ಕೃಷ್ಣಾ ನದಿಗೆ 1.60 ಲಕ್ಷ ಕ್ಯೂಸೆಕ್ ಇದ್ದ ನೀರಿನ ಒಳ ಹರಿವು 1.65 ಲಕ್ಷ ಕ್ಯೂಸೆಕ್ ಮುಟ್ಟಿದೆ. ಹೀಗಾಗಿ ಶುಕ್ರವಾರ ನದಿ ನೀರಿನ ಮಟ್ಟ ಎರಡು ಅಡಿ ಹೆಚ್ಚಾಗಿ ಅಪಾಯದ ಮಟ್ಟ ಮೀರಿದೆ.
10 ಸೇತುವೆ ಜಲಾವೃತ, ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಉಗಾರ, ರಾಯಬಾಗ ತಾಲೂಕಿನ ಜಮಖಂಡಿ-ಮಿರಜ ರಸ್ತೆಯ ಕುಡಚಿ, ಚಿಕ್ಕೋಡಿ ತಾಲೂಕಿನ ಕಲ್ಲೋಳ-ಯಡೂರ, ಸದಲಗಾ- ಬೋರಗಾಂವ, ಮಲಿಕವಾಡ-ದತ್ತವಾಡ, ಕಾರದಗಾ- ಭೋಜ, ಯಕ್ಸಂಬಾ-ಧಾನವಾಡ, ಬೋಜವಾಡಿ- ಕುನ್ನೂರ, ಜತ್ರಾಟ-ಭೀವಸಿ, ಸಿದ್ನಾಳ-ಅಕ್ಕೋಳ ಸೇತುವೆ ಸೇರಿದಂತೆ ಚಿಕ್ಕೋಡಿ ಉಪವಿಭಾಗದಲ್ಲಿ ಹತ್ತು ಸೇತುವೆಗಳು ಮುಳುಗಡೆಯಾಗಿವೆ. ಇಂಗಳಿ ಗ್ರಾಮದ ಮಳಿ ಭಾಗದಲ್ಲಿ ವಾಸ ಮಾಡುವ ಕೆಲ ಕುಟುಂಬಗಳನ್ನು ತಾಲೂಕಾಡಳಿತ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ.