ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ಕೃಷಿ ಸಂಘದ ವಿದ್ಯಾರ್ಥಿಗಳಿಂದ ಭತ್ತದ ನಾಟಿ ಕಾರ್ಯಕ್ರಮ – ಕಹಳೆ ನ್ಯೂಸ್
“ಮಣ್ಣ್ ಡ್ ಪೊಂರ್ಬಿನಾಯೆ ನುಪ್ಪು ತಿನುವೆ, ನರಮಾನಿಯಡ ಪೊಂರ್ಬಿನಾಯೆ ಮಣ್ಣ್ ತಿನುವೆ” ಎಂಬ ತುಳು ಗಾದೆ ಮಾತಿನಂತೆ ನಮ್ಮ ಹಿರಿಯರು ಜೀವನದ ಅವಿಭಾಜ್ಯ ಅಂಗವಾಗಿ ಮಣ್ಣನ್ನೇ ನಂಬಿ ಬದುಕಿದವರು ಅರ್ಥಾತ್ ಕೃಷಿಯನ್ನೇ ಅವಲಂಬಿಸಿದವರು. ಆದರೆ ಕೃಷಿಯ ಆಕರ್ಷಣೆ ಆಧುನಿಕತೆಯ ಭರಾಟೆಯಲ್ಲಿ ಮೂಲೆಗುಂಪಾಗಿರುವುದು ಸುಳ್ಳಲ್ಲ. ಇಂತಹ ಆಕರ್ಷಣೆ ವಿದ್ಯಾರ್ಥಿಗಳಲ್ಲಿಯೂ ಕಡಿಮೆಯಾಗಿರುವುದು ಖೇದಕರ. ಇಂತಹ ಚಿಂತನೆ ಎಳವೆಯಲ್ಲೇ ಮೂಡಬೇಕೆನ್ನುವ ಸದಾಶಯದೊಂದಿಗೆ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ಕೃಷಿ ಸಂಘದ ವಿದ್ಯಾರ್ಥಿಗಳು ಭತ್ತದ ನಾಟಿ ಕಾರ್ಯವನ್ನು ಸುಧೇಕ್ಕಾರ್ ನಲ್ಲಿರುವ 2 ಎಕರೆ ಗದ್ದೆಯಲ್ಲಿ ಮಾಡಿದರು.
“ಶಿಕ್ಷಣವೆನ್ನುವುದು ಅಂಕಗಳಿಕೆಯ ಪರಮೊದ್ದೇಶವಾಗುವ ಈ ಕಾಲದಲ್ಲಿ ಕೃಷಿ ಮತ್ತು ಭತ್ತ ಬೆಳೆಯುವ ಹಂತಗಳನ್ನು ಕೇಳಿದಾಗಲೂ ಉತ್ತರ ಸಿಗುವುದು ಕಷ್ಟಸಾಧ್ಯ. ಹೀಗೆ ಚಟುವಟಿಕಯೊಂದಿಗಿನ ಪ್ರಾಯೋಗಿಕ ಶಿಕ್ಷಣದಿಂದ ತಮ್ಮ ಮನೆ, ಕುಟುಂಬದ ಕೃಷಿ ಭೂಮಿಯ ರಕ್ಷಣೆಯೂ ಶಿಕ್ಷಿತರ ಆದ್ಯತೆಯಾಗಬೇಕೆನ್ನುವುದೇ ಸದುದ್ದೇಶವಾಗಿದೆ. ಈ ದೃಷ್ಟಿಯಿಂದ ಈ ನಾಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.”ಎಂದು ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿಯ ಸದಸ್ಯೆ ಕಮಲಾ ಪ್ರಭಾಕರ್ ಭಟ್ ತಿಳಿಸಿದರು
ನಾಟಿ ಕಾರ್ಯಕ್ರಮವನ್ನು ಕೃಷಿ ಸಂಘದ ಅಧ್ಯಕ್ಷೆ ಚೇತನಾ ಇವರಿಗೆ ಡಾ|| ಕಮಲಾ ಪ್ರಭಾಕರ್ ಭಟ್ ತಲೆಗೆ ಮುಟ್ಟಾಲೆ ಇಡುವುದರ ಮೂಲಕ ಉದ್ಘಾಟಿಸಿದರು. ಹಾಗೆಯೇ ಸಹಸಂಚಾಲಕರಾದ ರಮೇಶ್, ಗದ್ದೆಗೆ ತಾಂಬೂಲವನ್ನು ಇಟ್ಟು ಪಾರ್ಥನೆ ಮಾಡುವದರ ಮೂಲಕ ಈ ನಾಟಿ ಕಾರ್ಯಕ್ಕೆ ಚಾಲನೆ ನೀಡಿದರು.
ಬೀಜದ ಆಯ್ಕೆ ಮತ್ತು ನೇಜಿಯನ್ನು ನಿಗದಿತ ದಿನದಂದು ತೆಗೆದು ಅಂತರ ಪ್ರಕಾರ ನಾಟಿ ಮಾಡುವ ಪ್ರಕ್ರಿಯೆಯ ಬಗ್ಗೆ ಜಯರಾಮ್ ಸುಧೆಕ್ಕಾರುರವರು ಮಾಹಿತಿ ಕೊಟ್ಟರು. ಹಾಗೆಯೇ ಟ್ರಾಕ್ಟರ್ ನಲ್ಲಿ ಉಳುಮೆ ಮಾಡುವ ವಿಧಾನವನ್ನು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿಕೊಟ್ಟರು.
“ಟಿಲ್ಲರ್ ಮೂಲಕ ಉಳುಮೆ ಮಾಡಿದ್ದು ಸಂತೋಷವಾಯಿತು. ಪಠ್ಯೇತರ ಚಟುವಟಿಕೆಯಲ್ಲಿ ಭಾಗಿಯಾಗಲು ಕೃಷಿಸಂಘವು ಅವಕಾಶ ನೀಡಿದ್ದು ನಮಗೆ ನಮ್ಮ ಮನೆಯಲ್ಲಿ ಕೃಷಿಯಲ್ಲಿ ಪಾಲ್ಗೊಳ್ಳಲು ಪ್ರೇರಣೆ ನೀಡಿದೆ” ಎಂದು ಟ್ರಾಕ್ಟರ್ ಮೂಲಕ ಉಳುಮೆ ಮಾಡಿದ 7ನೇ ತರಗತಿಯ ಸುಶಾಂತ್ ಹೇಳಿದರು.
ನೆಟ್ಟಿಗದ್ದೆಗೆ ಮುಟ್ಟಾಲೆ ಇಟ್ಟು ನಾಟಿ ಕಾರ್ಯಕ್ಕೆ ಸಾಂಪ್ರದಾಯಿಕ ಉಡುಪಿನೊಂದಿಗೆ ಬಂದಂತಹ ವಿದ್ಯಾರ್ಥಿಗಳು ಹಿರಿಯ ನಾಟಿ ಪರಿಣತೆ ನಾಗಮ್ಮರವರ ನೇತೃತ್ವದಲ್ಲಿ ಜನಪದ ಸೊಬಗನ್ನು ಬಿಂಬಿಸುವ ಪಾಡ್ದನ ಹೇಳುತ್ತಾ ನೇಜಿಯನ್ನು ತೆಗೆದರು. ಶಾಲಾಭಿವೃದ್ಧಿ ಸಮಿತಿಯವರು, ಮಾತೃಭಾರತಿ ಸಮಿತಿಯವರು, ಪೋಷಕರು, ಶಾಲಾ ಬಸ್ ಚಾಲಕರು ಹಾಗೂ ಅಧ್ಯಾಪಕ ವೃಂದದವರು ತಾವೂ ಭಾಗಿಯಾಗುವುದರ ಮೂಲಕ ವಿದ್ಯಾರ್ಥಿಗಳಿಗೆ ಸಹಕಾರವಿತ್ತರು. ಈ ರೀತಿ ತಾವೇ ಬೆಳೆದ ಬೆಳೆಯನ್ನು ಮಧ್ಯಾಹ್ನದ ಭೋಜನಕ್ಕೆ ಉಪಯೋಗಿಸುತ್ತಿದ್ದಾರೆ.
ಪ್ರತೀ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ವೃಂದದವರು ಒಂದೇ ಬಗೆಯ ಉಪಹಾರವನ್ನು ತಂದು ಒಂದೆಡೆ ಸೇರಿಸಿ ಸಾಮರಸ್ಯ ಉಪಹಾರ ಸವಿದಿರುವುದು ವಿಶೇಷವಾಗಿದೆ. ಅಧ್ಯಾಪಕರ ಸಹಕಾರದೊಂದಿಗೆ ಮಧ್ಯಾಹ್ನಕ್ಕೆ ಗಂಜಿ – ಚಟ್ನಿ ಹಾಗೂ ವಿದ್ಯಾರ್ಥಿಗಳೇ ತಯಾರಿಸಿದ ಉಪ್ಪಡ್ ಪಚ್ಚಿಲ್(ಹಲಸಿನಕಾಯಿ ಪಲ್ಯ)ವನ್ನು ಒಂದೆಡೆ ಸೇರಿ ಸವಿದರು.
ಈ ನೇಜಿ ನಾಟಿ ಕಾರ್ಯದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ, ಸಹಸಂಚಾಲಕ ರಮೇಶ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ಸಾಲ್ಯಾನ್, ಸದಸ್ಯ ಜಯರಾಂ ರೈ, ಆಡಳಿತ ಮಂಡಳಿಯ ಸದಸ್ಯರಾದ ಲಕ್ಷ್ಮೀ ರಘುರಾಜ್, ಮಲ್ಲಿಕಾ ಶೆಟ್ಟಿ, ಸುಧಾ ಕಶೆಕೋಡಿ, ಪೋಷಕರಾದ ಜಯರಾಮ್ ಸುಧೆಕ್ಕಾರು, ಹಾಗೂ ಮುಖ್ಯೋಪಾಧ್ಯಾಯ ರವಿರಾಜ್ ಕಣಂತೂರು ಉಪಸ್ಥಿತರಿದ್ದರು.