ಹೊಸದಿಲ್ಲಿ: ನರೇಂದ್ರ ಮೋದಿ ಸರಕಾರದ ವಿರುದ್ಧ ಶನಿವಾರ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ,” ಬಿಜೆಪಿ ಸರಕಾರಕ್ಕೆ ಕಟ್ಟುವ ಕೆಲಸ ಗೊತ್ತಿಲ್ಲ. ಪೂರ್ವಜರು ಕಠಿಣ ಶ್ರಮ, ಶ್ರದ್ಧೆಯಿಂದ ಕಟ್ಟಿರುವ ಸಂಸ್ಥೆಗಳನ್ನು ನಾಶಮಾಡುವುದಕ್ಕೆ ಮಾತ್ರ ಗೊತ್ತಿದೆ” ಎಂದರು.
ಕಫೆ ಕಾಫಿ ಡೇ ಸಂಸ್ಥಾಪಕ ವಿಜಿ ಸಿದ್ದಾರ್ಥ್ ಆತ್ಮಹತ್ಯೆ ಮಾಡಿಕೊಂಡ ಬಳಿಕ ದೇಶದ ಉದ್ಯಮರಂಗಕ್ಕೆ ಹೇಗೆ ಪರಿಣಾಮಬೀರಬಹುದು ಎಂಬ ಕುರಿತು ಚರ್ಚೆಯಾಗುತ್ತಿರುವ ಸಮಯದಲ್ಲಿ ರಾಹುಲ್ ಹೇಳಿಕೆ ನೀಡಿದ್ದಾರೆ.
”ಬಿಜೆಪಿ(ಭಾರತೀಯ ಜನತಾ ಪಕ್ಷ)ಸರಕಾರ ಏನನ್ನೂ ನಿರ್ಮಿಸುವುದಕ್ಕೆ ಹೋಗುವುದಿಲ್ಲ. ಆದರೆ, ಕಳೆದ ಹಲವಾರು ದಶಕಗಳಿಂದ ಶ್ರದ್ಧೆ ಹಾಗೂ ಕಠಿಣ ಪರಿಶ್ರಮದಿಂದ ಬೆಳದಿರುವುದನ್ನು ನಾಶಪಡಿಸಬಲ್ಲದು” ಎಂದು ಟ್ವಿಟರ್‌ನಲ್ಲಿ ರಾಹುಲ್ ಬರೆದಿದ್ದಾರೆ.
ಎಲ್ ಆಯಂಡ್ ಟಿ ಅಧ್ಯಕ್ಷ ಎಎಂ ನಾಯಕ್ ಭಾರತೀಯ ಆರ್ಥಿಕತೆ ಕುರಿತು ನೀಡಿರುವ ಹೇಳಿಕೆ, ಭಾರತೀಯ ರೈಲ್ವೆಯ ಉದ್ಯೋಗ ಕಡಿತ ಯೋಜನೆಗಳು, ಆಟೋಮೊಬೈಲ್ ಸೆಕ್ಟರ್‌ನ ಹಿಂಜರಿತ, ಎರಡು ಸರಕಾರಿ ಸ್ವಾಮ್ಯದ ಟೆಲಿಕಾಮ್ ಸಂಸ್ಥೆಗಳಾದ ಬಿಎಸ್‌ಎನ್‌ಎಲ್, ಎಂಟಿಎನ್‌ಎಲ್ ಉದ್ಯೋಗಿಗಳಿಗೆ ವೇತನ ನೀಡಲು ವಿಫಲವಾಗಿರುವ ಸುದ್ದಿಗಳನ್ನು ರಾಹುಲ್ ಹಂಚಿಕೊಂಡಿದ್ದಾರೆ.