ಪುತ್ತೂರು: ವಿದ್ಯಾರ್ಥಿಗಳು ಉದ್ವೇಗಕ್ಕೆ ಒಳಗಾಗದೆ ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು ಅಧ್ಯಯನದ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಮೌಲ್ಯಯುತ ಜೀವನಕ್ಕೆ ಒತ್ತು ಕೊಟ್ಟಾಗಲೇ ಒಬ್ಬ ಉತ್ತಮ ನಾಗರಿಕನೆನಿಸಿಕೊಳ್ಳುವುದು ಎಂದು ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ ಹೇಳಿದರು.
ಅವರು ಕಾಲೇಜಿನ ಸ್ನಾತಕೋತ್ತರ ಗಣಕ ವಿಜ್ಞಾನ ವಿಭಾಗಕ್ಕೆ ದಾಖಲಾತಿ ಹೊಂದಿದ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಸಭಾಂಗಣದಲ್ಲಿ ಆಗಸ್ಟ್ 1ರಂದು ಏರ್ಪಡಿಸಲಾದ ಫ್ರೆಶರ್ಸ್ ಡೇ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಮಾತನಾಡಿದರು. ಸ್ನಾತಕೋತ್ತರ ಶಿಕ್ಷಣವು ವಿದ್ಯಾರ್ಥಿಗಳ ನೈಜ ಬದುಕನ್ನು ನಿರ್ಧರಿಸುವ ಬಹು ಮುಖ್ಯ ಅಂಗ. ಅಧ್ಯಯನ ಕೇಂದ್ರದಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ಎಲ್ಲಾ ರೀತಿಯ ಸವಲತ್ತುಗಳನ್ನು ಕಲ್ಪಿಸಲಾಗಿದೆ. ಅವಕಾಶಗಳನ್ನು ಸದುಪಯೋಗಿಕೊಂಡಾಗ ಬದುಕು ಯಶಸ್ವಿಗೊಳ್ಳುವುದು ಎಂದರು.
ವಿಭಾಗದ ಸಂಯೋಜಕ ಗೋವಿಂದ ಪ್ರಕಾಶ್ ಸಿ ಎಚ್ ಮಾತನಾಡಿ, ಸಮಾಜದ ಸಮರ್ಪಕ ಬೆಳವಣಿಗೆಯಲ್ಲಿ ಮಾನವೀಯತೆ ಮತ್ತು ತಂತ್ರಜ್ಞಾನದ ಸಮ್ಮಿಲನ ಪ್ರಮುಖ ಪಾತ್ರ ವಹಿಸುತ್ತದೆ. ತಂತ್ರಜ್ಞಾನವನ್ನು ಸೂಕ್ತ ರೀತಿಯಲ್ಲಿ ಬಳಸಿದಾಗಲೇ ಸಮಾಜಕ್ಕೆ ಒಳಿತು ಎಂದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೊ ನೊರೊನ್ಹಾ ಮಾತನಾಡಿ, ಜೀವನ ಮೌಲ್ಯಗಳನ್ನು ಬಲಪಡಿಸಿಕೊಳ್ಳಲು ಎಲ್ಲ ರೀತಿಯ ಪ್ರಯತ್ನ ನಮ್ಮಲ್ಲಿರಬೇಕು. ಸ್ವತಂತ್ರ ಮೌಲ್ಯಗಳಿದ್ದಾಗ ಯಾವುದೇ ಟೀಕೆಗಳು ನಮ್ಮನ್ನು ಹಿಂಬಾಲಿಸುವುದಿಲ್ಲ. ವಿದ್ಯಾರ್ಥಿ ದಿಸೆಯಲ್ಲಿ ಆಸಕ್ತಿ ಮತ್ತು ಸತತ ಪ್ರಯತ್ನ ಭವಿಷ್ಯವನ್ನು ನಿರ್ಧರಿಸಬಲ್ಲವು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಅಕ್ಷತಾ ಬಿ, ರಮ್ಯಾ ಎಸ್ ಮತ್ತು ಯಶಸ್ವಿ ಕೆ ಎಸ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಯೋಗಿತಾ ವಿ ಸ್ವಾಗತಿಸಿ, ಸುನಿಲ್ ಕುಮಾರ್ ವಿ ವಂದಿಸಿದರು. ನಿಶಿತಾ ರೈ ಕಾರ್ಯಕ್ರಮ ನಿರೂಪಿಸಿದರು.