ಬೆಂಗಳೂರು: “ನಾನೀಗ ಬೆಂಗಳೂರಿನ ಸೇವಕ. ನಗರದಲ್ಲಿ ಗೂಂಡಾಗಿರಿ, ವಸೂಲಿ, ಸುಲಿಗೆ ಕಸುಬಿಗೆ ಕಡಿವಾಣ, ರಾಜಧಾನಿಯ ನಾಗರಿಕರಿಗೆ ಭಯಮುಕ್ತ, ಸುರಕ್ಷಿತ ಜೀವನ ನಡೆಸುವ ವಾತಾವರಣ ಕಲ್ಪಿಸುವುದು ಈ ಸೇವಕನ ಗುರಿ, ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಶುಕ್ರವಾರ ಅಧಿಕಾರ ವಹಿಸಿಕೊಂಡ ಭಾಸ್ಕರ್ ರಾವ್ ಹೇಳಿದ್ದಾರೆ.
ಅಧಿಕಾರ ಸ್ವೀಕರಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಾಸ್ಕರ್ ರಾವ್, “ಬೆಂಗಳೂರು ಜನರ ಜತೆ ಎಂದೆಂದಿಗೂ ನಾವಿದ್ದೇವೆ’ ಎಂಬ ಘೋಷ ವಾಕ್ಯದ ಅಡಿಯಲ್ಲಿ ನಗರ ಪೊಲೀಸ್ ವಿಭಾಗವನ್ನು ಮುನ್ನಡೆಸುತ್ತೇನೆ. ನಗರದ ಶಾಲಾ ಕಾಲೇಜುಗಳಿಗೆ ಹಬ್ಬಿರುವ “ಡ್ರಗ್ಸ್ ಮಾಫಿಯಾ’ದ ಬಳ್ಳಿಗಳನ್ನು ಕತ್ತರಿಸಿ ಈ ಮಾಫಿಯಾ ಕಡಿವಾಣದ ಗುರಿ ಹಾಕಿಕೊಳ್ಳಲಾಗಿದೆ. ಇದಕ್ಕೆ ಶಾಲಾ ಕಾಲೇಜುಗಳು, ಸಾರ್ವಜನಿಕರು ಸಹಕರಿಸಬೇಕು ಎಂದು ಕೋರಿದರು.
ಜನಸ್ನೇಹಿ ಪೊಲೀಸ್ ವ್ಯವಸ್ಥೆ ಎಂಬುದು ಬರೀ ಮಾತಿನಲ್ಲಷ್ಟೇ ಉಳಿಸದೆ ಕಾರ್ಯರೂಪಕ್ಕೆ ತರಲು ಮತ್ತಷ್ಟು ಯತ್ನಿಸಬೇಕಿದೆ. ಸಾರ್ವಜನಿಕರು ಮುಕ್ತವಾಗಿ ತಮಗೆ ಆಗುವ ಅನ್ಯಾಯಗಳ ವಿರುದ್ಧ ದೂರು ನೀಡಬಹುದು. ಅವುಗಳನ್ನು ಕಾನೂನು ಕ್ರಮಗಳ ಅನ್ವಯ ಇತ್ಯರ್ಥಪಡಿಸಲಾಗುವುದು. ತನಿಖಾ ಹಂತದಲ್ಲಿರುವ ಅಸಂಖ್ಯಾತ ಪ್ರಕರಣಗಳನ್ನು ತ್ವರಿತಗತಿಯಲ್ಲಿ ತನಿಖೆ ಚುರುಕುಗೊಳಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಪ್ರತಿಯೊಬ್ಬ ಕಾನ್ಸ್ ಟೇಬಲ್ ಕೂಡ ಪೊಲೀಸ್ ವ್ಯವಸ್ಥೆಯ ಪ್ರತಿನಿಧಿ. ಅವರ ಕರ್ತವ್ಯ ನಿರ್ವಹಣೆಗೂ ಮುಕ್ತ ಅವಕಾಶವಿದೆ. ಅವರೂ ಇಲಾಖೆಯ ಲೀಡರ್‍ಗಳ ಹಾಗೆ ಮುಕ್ತವಾಗಿ ಕೆಲಸ ಮಾಡಲು ಮನೋಬಲ ತುಂಬಲಾಗುವುದು. ಅವರ ಕರ್ತವ್ಯ ಸಂಕಷ್ಟಗಳಿಗೆ, ಸಮಸ್ಯೆಗಳಿಗೆ ಬೆನ್ನೆಲುಬಾಗಿ ನಿಲ್ಲಲಾಗುತ್ತದೆ ಎಂದರು.