ಮೈಸೂರು: ಪ್ರವಾಸಕ್ಕೆ ಬಂದಿದ್ದ ಇಂಜಿನಿಯರ್ ಒಬ್ಬರು ಕೆರೆಯಲ್ಲಿ ಬೋಟಿಂಗ್ ಮಾಡುತ್ತಿದ್ದ ಸಂದರ್ಭ ಆಯತಪ್ಪಿ ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಪಿರಿಯಾಪಟ್ಟಣ ತಾಲೂಕು ಬಿಲಗುಂದ ಗ್ರಾಮದ ಕೆಸರೆಕೆರೆಯಲ್ಲಿ ಈ ಘಟನೆ ನಡೆದಿದೆ. ತಮಿಳುನಾಡಿನ ಕೊಯಮತ್ತೂರು ಮೂಲದ ಶ್ರೀನಿವಾಸನ್ ಅವರ ಮಗ ಐ.ಎಸ್.ಎಸ್ ಕಾರ್ತಿಕ್ ಮೃತಪಟ್ಟಿರುವ ವ್ಯಕ್ತಿ. ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸಿದಾಗ ನಿನ್ನೆ ಸಂಜೆ ಶವ ಪತ್ತೆಯಾಗಿದೆ.
ಕೊಪ್ಪ ಗ್ರಾಮದಲ್ಲಿರುವ ಅಡ್ವೆಂಚರ್ ಎಂಬ ಹೆಸರಿನ ಬೋಟಿಂಗ್ ಪ್ರವಾಸಿ ತಾಣವಾಗಿ ಅನುಮತಿ ಪಡೆದುಕೊಂಡು ನಾಲ್ವರು ಜಂಟಿ ಮಾಲೀಕತ್ವದಲ್ಲಿ ನಡೆಸುತ್ತಿದ್ದು ಆದಾಯ ನಷ್ಟವಾಗಿದ್ದರಿಂದ ಕಳೆದ 15 ದಿನದಿಂದ ಸ್ಥಗಿತಗೊಳಿಸಲಾಗಿತ್ತು.
ಕೊಯಮತ್ತೂರಿನಿಂದ 40 ಮಂದಿ ಪ್ರವಾಸಿಗರು ಅಕ್ಕಪಕ್ಕದಲ್ಲಿರುವ ಪ್ರವಾಸಿ ತಾಣವನ್ನು ಪರಿಚಯಿಸಿಕೊಡುವಂತೆ ಒತ್ತಾಯಿಸಿದಾಗ ಡಿಜಿ ಮತ್ತು ಸಿಜು ಎಂಬುವವರು ಈ ಜಾಗಕ್ಕೆ ಕರೆ ತಂದರು ಎನ್ನಲಾಗಿದೆ. ನಂತರ ಈ ತಾಣಕ್ಕೆ ಆಗಮಿಸಿದ ಪ್ರಯಾಣಿಕರು ಕೆರೆಯಲ್ಲಿ ಬೋಟಿಂಗ್ ಮಾಡುವಾಗ ಕಾರ್ತಿಕ್ ತನ್ನ ಮೊಬೈಲ್‍ನಿಂದ ವಿಡಿಯೊ ತೆಗೆದುಕೊಳ್ಳುವಾಗ ಆಯತಪ್ಪಿ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಪ್ರಕರಣವನ್ನು ಬೆಟ್ಟದಪುರ ಠಾಣಾ ಪೊಲೀಸರು ದಾಖಲಿಸಿಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾರೆ.