Wednesday, January 22, 2025
ರಾಜಕೀಯಸುದ್ದಿ

ಸಂಪುಟ ರಚನೆ ಹಗ್ಗಜಗ್ಗಾಟ ಮುಗಿದ ನಂತರ, ಸೆ.2ನೇ ವಾರದಲ್ಲಿ ರಾಜ್ಯ ಬಜೆಟ್ – ಕಹಳೆ ನ್ಯೂಸ್

ಬೆಂಗಳೂರು: ಸಂಪುಟ ರಚನೆ ಹಗ್ಗಜಗ್ಗಾಟ ಮುಗಿದ ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂದಿನ ತಿಂಗಳ ಎರಡನೇ ವಾರದಲ್ಲಿ ಬಿಜೆಪಿ ಸರ್ಕಾರದ ನೂತನ ಬಜೆಟ್ ಮಂಡಿಸಲಿದ್ದಾರೆ. ಹಣಕಾಸು ಖಾತೆಯನ್ನು ತಮ್ಮ ಬಳಿಯೇ ಇಟ್ಟುಕೊಳ್ಳುವ ಯಡಿಯೂರಪ್ಪ ಸೆಪ್ಟೆಂಬರ್ ಎರಡನೇ ವಾರದಲ್ಲಿ ಪ್ರಸಕ್ತ ಸಾಲಿನ ಬಜೆಟ್ ಮಂಡಿಸಲಿದ್ದು, ಇದಕ್ಕಾಗಿ ಈಗಾಗಲೇ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದಾರೆ.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅಧಿಕಾರಿಗಳ ಸಭೆಯನ್ನು ನಿರಂತರವಾಗಿ ನಡೆಸುತ್ತಿರುವ ಅವರು, ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಪನ್ಮೂಲಗಳ ಕ್ರೂಢೀಕರಣ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡಿಸಿದ ಬಜೆಟ್‍ನಲ್ಲಿ ಖರ್ಚಾಗಿರುವ ಅನುದಾನ, ಹೊಸ ಕಾರ್ಯಕ್ರಮಗಳ ಘೋಷಣೆ ಸೇರಿದಂತೆ ಹೊಸ ಬಜೆಟ್ ಮಂಡನೆಗೆ ಕೈಗೊಳ್ಳಬೇಕಾದ ಸಿದ್ಧತೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಮಾಹಿತಿ ಕಲೆ ಹಾಕಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸೆಪ್ಟೆಂಬರ್ ತಿಂಗಳ ಎರಡನೇ ವಾರದಲ್ಲಿ ಯಡಿಯೂರಪ್ಪ ಪ್ರಸಕ್ತ ಸಾಲಿನ ಬಜೆಟ್ ಮಂಡಿಸಲಿದ್ದು, ಸುಮಾರು ಎರಡುವಾರಗಳ ಕಾಲ ಅಧಿವೇಶನ ನಡೆಸಲು ಚಿಂತನೆ ನಡೆಸಿದ್ದಾರೆ. ಇತ್ತೀಚೆಗೆ ಯಡಿಯೂರಪ್ಪ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವ ವೇಳೆ ದೋಸ್ತಿ ಸರ್ಕಾರದ ಬಜೆಟ್‍ಗೆ ಕೇವಲ ಮೂರು ತಿಂಗಳ ಲೇಖಾನುದಾನ ಪಡೆದಿದ್ದರು. ಪೂರ್ಣಾವಧಿಗೆ ಲೇಖಾನುದಾನ ಪಡೆದರೆ ಹೊಸ ಬಜೆಟ್ ಮಂಡಿಸಲು ಅವಕಾಶ ಸಿಗುವುದಿಲ್ಲ ಎಂಬ ಕಾರಣಕ್ಕಾಗಿಯೇ ಮುಂಜಾಗ್ರತ ಕ್ರಮವಾಗಿ ಕೇವಲ ಮೂರು ತಿಂಗಳ ಅವಧಿಗೆ ಮಾತ್ರ ಸದನದಲ್ಲಿ ಲೇಖಾನುದಾನ ಮಂಡಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು