Wednesday, January 22, 2025
ಸುದ್ದಿ

ಮುಂಬೈ ಪ್ರವಾಹ ಉಲ್ಬಣ : ಜನಜೀವನ ಅಸ್ತವ್ಯಸ್ತ – ಕಹಳೆ ನ್ಯೂಸ್

ಮುಂಬೈ: ರಾತ್ರಿಯಿಡೀ ಸುರಿದ ಧಾರಾಕಾರ ಮಳೆಯಿಂದ ವಾಣಿಜ್ಯ ನಗರಿಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಪಲ್ಗಾರ್ ಸಮೀಪ ಪಿಂಜಾಲ್ ನದಿಗೆ ಅಡ್ಡಲಾಗಿ ಕಟ್ಟಿದ ಸೇತುವೆ ಭಾಗಶಃ ಕುಸಿದಿದೆ. ಬಾದಲ್‍ಪುರ- ಅಂಬೆರ್‍ನಾಥ್, ವಸಾಯಿ- ವಿರಾರ್ ಭಾಗದ ಜನವಸತಿಗಳಲ್ಲಿ ಜನ ಗೃಹಬಂಧನಕ್ಕೆ ಒಳಗಾಗಿದ್ದು, ಐದು ಮಂದಿ ಅನಾಹುತಗಳಲ್ಲಿ ಜೀವ ಕಳೆದುಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸೋಮವಾರ ಕೂಡಾ ವ್ಯಾಪಕ ಮಳೆಯಾಗುವ ಸಾಧ್ಯತೆಯನ್ನು ಹವಾಮಾನ ಇಲಾಖೆ ಅಂದಾಜಿಸಿದ್ದು, ಮುಂಬೈ, ಥಾಣೆ, ಪಲ್ಗಾರ್ ಮತ್ತು ರಾಯಗಡದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮುಂಬೈ ಸಿಎಸ್‍ಟಿ ಮತ್ತು ಥಾಣೆ ನಡುವಿನ, ಸಿಎಸ್‍ಟಿ ಹಾಗೂ ಮಣ್‍ಖುರ್ದು ನಡುವಿನ ರೈಲು ಸಂಚಾರ ಸ್ಥಗಿತಗೊಂಡಿದೆ. ಅಂತೆಯೇ ಕಲ್ಯಾಣ್- ಕರಿಜೋತ್ ಕಾರಿಡಾರ್‍ನಲ್ಲಿ ರೈಲು ಸೇವೆ ಪುನಾರಂಭಕ್ಕೆ ಕನಿಷ್ಠ ಎರಡು ದಿನ ಬೇಕು ಎಂದು ರೈಲ್ವೆ ಇಲಾಖೆ ಪ್ರಕಟಿಸಿದ್ದು, ಕಲ್ಯಾಣ್‍ನಿಂದಾಚೆಗೆ ವಾಸಿಸುವ ನಿವಾಸಿಗಳ ಸಂಚಾರ ತೊಂದರೆ ಮತ್ತಷ್ಟು ಹೆಚ್ಚಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಭಾರವಿ ಅಣೆಕಟ್ಟಿನಿಂದ ಬಿಡುಗಡೆ ಮಾಡಲಾದ ನೀರು ಹಾಗೂ ಮಿಥಿ ನದಿ ಉಕ್ಕಿ ಹರಿಯುತ್ತಿರುವ ಕಾರಣದಿಂದ ಜನ ಆತಂಕಿತರಾಗಿದ್ದಾರೆ. ಬದ್ಲಾಪುರ, ಶೆಲು ಮತ್ತು ನೆರಲ್ ಪ್ರದೇಶಗಳಲ್ಲಿ ರೈಲು ಹಳಿಗಳು ಕೊಚ್ಚಿಕೊಂಡು ಹೋಗಿವೆ.
ವಸಾಯ್ ಮತ್ತು ವಿರಾರ್ ನಡುವಿನ ರೈಲು ಸಂಚಾರ ರವಿವಾರ ಸುಮಾರು ಏಳು ಗಂಟೆ ಸ್ಥಗಿತಗೊಂಡಿತ್ತು. ಹವಾಮಾನ ಇಲಾಖೆ ಮುನ್ಸೂಚನೆ ಹಿನ್ನೆಲೆಯಲ್ಲಿ ಪ್ರವಾಹಪೀಡಿತ ಪ್ರದೇಶಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಸಿಎಂ ಕಚೇರಿಯ ಟ್ವೀಟ್ ಹೇಳಿದೆ. ಈ ಭಾಗದ ಎಲ್ಲ ಸರ್ಕಾರಿ ಹಾಗೂ ಅರೆಸರ್ಕಾರಿ ಉದ್ಯೋಗಿಗಳು ತಡವಾಗಿ ಹಾಜರಾಗಲು ಅನುಮತಿ ನೀಡಲಾಗಿದೆ.