ನಾಗಾರಾಧನೆ, ನಾಗಮಂಡಲ ಕರಾವಳಿಯ(ತುಳುನಾಡ) ಒಂದು ವಿಶಿಷ್ಟ ನಾಗ ಸೇವೆ ಅನಾದಿಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಋಗ್ವೇದದಲ್ಲಿಯೂ ಈ ಬಗ್ಗೆ ಪ್ರಸ್ತಾಪವುಂಟು. ಭಾರತದೆಲ್ಲೆಡೆ ನಾಗಪೂಜೆಗೆ ಮಹತ್ವ ಇರುವುದಾದರೂ ಕರಾವಳಿಯ (ತುಳುನಾಡ) ಸೀಮೆಯಲ್ಲಿ ನಾಗಮಂಡಲ ಪೂಜೆಗೆ ವಿಶೇಷ ಮಹತ್ವ. ಪುರಾಣದಲ್ಲಿ ಒಂದು ಕತೆಯಿದೆ. ಗರುಡನಿಗೂ ವಾಸುಕಿಗೂ ಬದ್ದ ದ್ವೇಷ. ಗರುಡನಿಗೆ ಹೆದರಿ ವಾಸುಕಿ ಗುಹೆಯಲ್ಲಿ ಅಡಗಿ ಕುಳಿತು ಶಿವನನ್ನು ಕುರಿತು ತಪಸ್ಸು ಮಾಡುತ್ತಾನೆ. ಆಗ ಶಿವನು ವಾಸುಕಿಗೆ ಅಭಯ ಹಸ್ತವನ್ನಿತ್ತು ತನ್ನ ಮಗನಾದ ಸುಬ್ರಮಣ್ಯನು ದುಷ್ಟ ನಿಗ್ರಹಕ್ಕಾಗಿ ಹುಟ್ಟಿ ಬರುವನೆಂದು, ಅವನ ಒಂದಂಶ ವಾಸುಕಿಯೊಂದಿಗೆ ಸೇರಿದಾಗ ವಾಸುಕಿಯೂ ಪೂಜಾರ್ಹನಾಗುವನೆಂದು ವರ ನೀಡುತ್ತಾನೆ.
ಅಂದಿನಿಂದಲೇ ನಾಗಪೂಜೆ ನಡೆದುಕೊಂಡು ಬಂದಿದೆಯಂದು ಪ್ರತೀತಿ.ನಾಗಾರಾಧನೆಯು ಜಗತ್ತಿನ ಇತಿಹಾಸದಲ್ಲಿ ಅತ್ಯಂತ ಪ್ರಾಚೀನವಾದುದು. ನಾಗಾರಾಧನೆ ಎಂಬುದು ಕೇವಲ ಗ್ರಾಮೀಣ ಜನತೆಯ ನಂಬಿಕೆಯಾಗಿ ಉಳಿದಿಲ್ಲ. ಈ ನಂಬಿಕೆಯು ಇಂದು ನಾಗರಿಕರೆನಿಸಿದ ವಿದ್ಯಾವಂತರ ಮನೆ ಮನಗಳಲ್ಲೂ ಆಳವಾಗಿ ಬೇರೂರಿ ನಿಂತಿದೆ. ನಾಗರ ಪಂಚಮಿಯಂದು ನಾಗದೇವತೆಗೆ ತನಿ ಹಾಕುವಲ್ಲಿಂದ, ತಂಬಿಲ ನೀಡುವಲ್ಲಿಂದ ತೊಡಗಿ ಅಷ್ಟ ಪವಿತ್ರ ನಾಗಮಂಡಲದಂತಹ ವಿಶಿಷ್ಟ ಆರಾಧನಾ ಕ್ರಮಗಳ ವರೆಗೆ ಅವರವರ ಶ್ರದ್ಧಾಭಕ್ತಿ, ಆರ್ಥಿಕ ಸ್ಥಿತಿಗತಿಗಳನ್ನು ಅವಲಂಬಿಸಿ ನಾಗಾರಾಧನೆಯನ್ನು ನಡೆಸಿಕೊಂಡು ಬರಲಾಗುತ್ತಿದೆ.
ನಾಗಾರಾಧನೆಯು ಒಟ್ಟಿನಲ್ಲಿ ನಾಗ ಪ್ರೀತಿಗಾಗಿ. ಆದರೆ ನಾಗಾರಾಧನೆಯ ಒಂದು ಅಂಗವಾದ ಆಶ್ಲೇಷಾ ಬಲಿ ಎಂಬುದು ನಾಗ ದೇವತೆಗೆ, ಸರ್ಪ ಸಂಕುಲಕ್ಕೆ ಮಾನವನಿಂದ ಒದಗಿದ ಹಾನಿಯ., ಅಪಚಾರದ ದೆಸೆಯಿಂದ ಉಂಟಾದ ಸರ್ಪ ಶಾಪದ ಪರಿಹಾರಾರ್ಥವಾಗಿ ನಡೆದು ಬಂದಿದೆ.
ನಾಗಾಲಯಗಳು – ಆಶ್ಲೇಷಾ ಬಲಿ: ಆಶ್ಲೇಷಾ ಬಲಿ ಎಂಬ ಪದಗಳನ್ನು ಕೇಳಿದೊಡನೆಯೇ ಶ್ರೀ ಪರಶುರಾಮ ಸೃಷ್ಟಿಯ ಕ್ಷೇತ್ರಗಳಾದ ಶ್ರೀ ಕುಕ್ಕೆಸುಬ್ರಹ್ಮಣ್ಯ, ಗುತ್ತಿಗಾರು ಸಮೀಪದ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ವಳಲಂಬೆ, ಮಂಗಳೂರು ತಾಲೂಕಿನ ಕುಡುಪು, ಕಾಸರಗೋಡು ತಾಲೂಕಿನ ಮಂಜೇಶ್ವರ, ಬೆಳ್ತಂಗಡಿ ತಾಲೂಕಿನ ಬಳ್ಳಮಂಜ, ಪುತ್ತೂರು ತಾಲೂಕಿನ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಶ್ರೀ ವಾಸುಕಿ ಸನ್ನಿಧಿ, ಆರ್ಯಾಪ ಗ್ರಾಮದ ಕಾರ್ಪಾಡಿ ಇಂತಹ ನಾಗಾಲಯಗಳಲ್ಲಿ ವಿಶೇಷವಾಗಿ ಆಶ್ಲೇಷ ನಕ್ಷತ್ರದ ತಿಥಿಯಂದು ಈ ಆರಾಧನೆ ನಡೆಯುತ್ತದೆ.
ಪಂಚಮೀ ಅಥವಾ ಷಷ್ಠೀ ತಿಥಿಯಿದ್ದರೂ ಈ ಆರಾಧನೆಗೆ ಪ್ರಶಸ್ತವೆಂಬ ನಂಬಿಕೆಯಿದೆ. ಆಶ್ಲೇಷ ನಕ್ಷತ್ರವು ತಾರಾ ಮಂಡಲದಲ್ಲಿ ಗುರುತಿಸಲಾದ ಇಪ್ಪತ್ತೇಳು ಮಹಾ ನಕ್ಷತ್ರಗಳಲ್ಲಿ ಒಂಭತ್ತನೆಯದು. ಜ್ಯೋತಿಷ್ಯ ಶಾಸ್ತ್ರಾಧಾರದಂತೆ ಪ್ರತಿನಕ್ಷತ್ರಕ್ಕೂ ಒಂದೊಂದು ನಕ್ಷತ್ರ ದೇವತೆ. ಆಶ್ಲೇಷ ನಕ್ಷತ್ರದ ನಕ್ಷತ್ರ ದೇವತೆಯು ಸರ್ಪ. ತನ್ನಿಂದ ಘಟಿಸಿದ ಪ್ರಮಾದದ ಪ್ರಾಯಶ್ಚಿತ್ತಕ್ಕಾಗಿ, ನಾಗದೇವತೆಯ ಅನುಗ್ರಹಕ್ಕಾಗಿ ನಾಗನಿಗೆ ಬಲಿ ಅಥವಾ ಆಹುತಿ ನೀಡುವ ಮೂಲಕ ನಡೆಸುವ ವಿಶೇಷ ಆರಾಧನೆಯೇ ಆಶ್ಲೇಷಾ ಬಲಿ.
ನಾಗನಿಗೇಕೀ ಮಹತ್ವ?
ನಾಗನು ಕೃಷಿ ಪ್ರಧಾನ ದೇವತೆ. ಸಕಾಲದಲ್ಲಿ ಮಳೆ ಬೆಳೆಗಳನ್ನು ಅನುಗ್ರಹಿಸುವಾತ. ಸಂತಾನವಿಲ್ಲದೆ ಕೊರಗುವವರಿಗೆ ಸಂತಾನ ಭಾಗ್ಯ ಕರುಣಿಸಬಲ್ಲ ಮಹಾಮಹಿಮ, ರೋಗ ರುಜಿನಗಳನ್ನು ತಡೆಯಬಲ್ಲ ವಿಶ್ವ ವೈದ್ಯನೀತ. ಆದುದರಿಂದ ಸರ್ಪಗಳಿಗೆ ಹಾನಿಯುಂಟು ಮಾಡಿದವನಿಗೆ ಸರ್ಪಶಾಪದಿಂದ ಕಷ್ಟಕಾರ್ಪಣ್ಯಗಳು ಸತತವಾಗಿ ಬಾಧಿಸುತ್ತಲೇ ಇರುತ್ತವೆ ಎಂಬುದು ಆಸ್ತಿಕರ ಅಚಲ ನಂಬಿಕೆ.
ಸರ್ಪಗಳ ಜನ್ಮ, ಸರ್ಪ ಸಂಕುಲ:
ಕಶ್ಯಪ ಮಹರ್ಷಿಯ ಹದಿಮೂರು ಮಂದಿ ಪತ್ನಿಯರಲ್ಲಿ ಕದ್ರು ಎಂಬಾಕೆ ಸರ್ಪಗಳ ಮಾತೆ. ಅವಳ ಮಕ್ಕಳಲ್ಲಿ ತಕ್ಷಕ, ವಾಸುಕಿ ಪ್ರಧಾನರು. ಅನಂತ, ಮಹಾಶೇಷ, ಕಪಿಲ, ನಾಗ, ಕುಳಿಕ, ಶಂಖಪಾಲ, ಭೂಧರ, ತಕ್ಷಕ, ವಾಸುಕಿ ಇವರು ನವನಾಗರೆಂದು ಪ್ರಸಿದ್ಧರು. ಇವರಲ್ಲೇ 52 ಮಂದಿ ಸರ್ಪಶ್ರೇಷ್ಠರೂ ಹದಿನಾರು ಸಾವಿರ ಪ್ರಕಾರಗಳ ಸರ್ಪಗಳೂ ಇವೆಯೆಂದು ಬ್ರಹ್ಮ ಪುರಾಣದಲ್ಲಿ ವರ್ಣಿತವಾಗಿದೆ. ವಿಷಮಯವಾದ ಹಲ್ಲುಗಳು, ಅಗ್ನಿ ಜ್ವಾಲೆಗಳನ್ನು ಹೊರಸೂಸುವಂತೆ ತೀಕ್ಷ್ಣವಾಗಿ ಹೊಳೆಯುವ ಕೆಂಗಣ್ಣುಗಳು, ಭಯಂಕರವಾದ ಕಡುಕೋಪವಿದ್ದರೂ ನಂಬಿ ಪೂಜಿಸಿದವರಿಗೆ ತಾರಕ ಶಕ್ತಿ- ನಂಬದೆ ಹಾನಿಯುಂಟು ಮಾಡಿದರೆ ಮಾರಕ ಶಕ್ತಿಯೂ ಹೌದು.
ನಾಗದೇವತೆಗೆ ಕಾಯೇನ, ವಾಚಾ, ಮನಸಾ ಹಾನಿಯುಂಟು ಮಾಡಿದರೆ, ಅಪಚಾರವೆಸಗಿದರೆ ಸರ್ಪಶಾಪದಿಂದ ವಿಧ ವಿಧದ ಅನಿಷ್ಟಗಳು ಎದುರಾಗಿ ಕಾಡುತ್ತವೆ ಎಂಬುದು ಅನುಭವಿಕರ ಮಾತು. ಆದುದರಿಂದ ಸರ್ಪಶಾಪದಿಂದ ಮುಕ್ತಿ ಪಡೆಯುವ ಮಾರ್ಗಗಳಲ್ಲಿ ಆಶ್ಲೇಷಾ ಬಲಿ ಆರಾಧನೆಯೂ ಒಂದು. ನಾಗರ ಪಂಚಮಿ, ಆಶ್ಲೇಷ ನಕ್ಷತ್ರದ ತಿಥಿ, ಷಷ್ಠಿಯದಿನ ಆಶ್ಲೇಷಾ ಬಲಿಗೆ ಪ್ರಶಸ್ತ. ಕುಕ್ಕೇ ಸುಬ್ರಹ್ಮಣ್ಯ ದೇವಸ್ತಾನದಲ್ಲಿ ಬಹುತೇಕ ಎಲ್ಲ ದಿನಗಳಲ್ಲೂ ಈ ಪೂಜೆ ನಡೆಯುತ್ತದೆ.
ಸರ್ಪ ಶಾಪ ಬರುವುದು ಹೇಗೆ?
ನಾಗ ದೇವತೆಗೆ ಹಾನಿಯುಂಟಾಗುವ, ಅಪಚಾರ ತರುವ ಪ್ರಸಂಗಗಳು ಹಲವು. ಈ ಜನ್ಮದ, ಪೂರ್ವಜನ್ಮದ, ಜನ್ಮ ಜನ್ಮಾಂತರಗಳ ಜೀವಿತಾವಧಿಯ ವಿವಿಧ ಅವಸ್ಥೆಗಳಲ್ಲಿ ಮನಸ್ಸು, ಮಾತು, ಶರೀರ, ಕಮೇರ್ಂದ್ರಿಯ ವ್ಯಾಪಾರಗಳಿಂದ, ಶರೀರದ ಅಂಗಾಂಗಗಳಿಂದ, ಅರಿಷಡ್ವರ್ಗಗಳ ದೆಸೆಯಿಂದ, ತಿಳಿದೋ, ತಿಳಿಯದೆಯೋ ಓರ್ವ ವ್ಯಕ್ತಿ, ಆತನ ಕುಟುಂಬಸ್ಥರು ಯಾ ಪೂರ್ವಜರಿಂದ ನಡೆದ ಸರ್ಪವಧೆ, ದಂಡದಿಂದ ಹೊಡೆಯುವಿಕೆ, ಹುತ್ತಗಳ ಅಗೆತ, ವೃಕ್ಷನಾಶ ಅಥವಾ ಇಂತಹ ದುಷ್ಕೃತ್ಯಗಳಿಗೆ ಪ್ರೇರಣೆ ನೀಡುವುದರಿಂದ ಸರ್ಪಶಾಪ ಉಂಟಾಗುತ್ತದೆ. ತನ್ಮೂಲಕ ಕುಟುಂಬದಲ್ಲಿ ಬಂಜೆತನ, ಸಂತತಿ ನಾಶ, ಕುಷ್ಠಾದಿ ಮಹಾರೋಗಗಳೂ ಇನ್ನಿತರ ಭಯಂಕರ ಆಪತ್ತುಗಳೂ ಉಂಟಾಗುತ್ತವೆ ಎಂದು ಆಶ್ಲೇಷಾ ಬಲಿ ವಿಧಾನದ ಸಂಕಲ್ಪದಲ್ಲಿ ಹೇಳಲಾಗಿದೆ. ಸರ್ಪಗಳ ಮೊಟ್ಟೆಗಳ ನಾಶವೂ ಇಂತಹ ಅಕೃತ್ಯಗಳ ಸಾಲಿಗೆ ಸೇರುತ್ತದೆ. ಕೃಷಿ ಕ್ಷೇತ್ರದಲ್ಲಿ ಕೃಷಿಕನಿಗೆ ತಿಳಿಯದೆಯೇ ಇಂತಹ ಹಾನಿಗಳು ಸಂಭವಿಸುತ್ತಿರುತ್ತವೆ. ಆದುದರಿಂದ ಕೃಷಿಕರು ವಿಶೇಷವಾಗಿ ನಾಗದೇವತೆಯ ಆರಾಧನೆ ಮಾಡುತ್ತಲೇ ಇರುವುದು ಅನಿವಾರ್ಯವಾಗಿದೆ. ಸಮಸ್ತ ಸರ್ಪದೋಷ, ಸರ್ಪ ಶಾಪಗಳ ಪ್ರಾಯಶ್ಚಿತ್ತ ಪರಿಹಾರಾರ್ಥವಾಗಿ, ಸಕಲೈಶ್ವರ್ಯ ಸಿದ್ಧಿಗಾಗಿ ಆಶ್ಲೇಷಾ ಬಲಿಯನ್ನು ನೀಡಲಾಗುತ್ತದೆ.
ಆಶ್ಲೇಷಾ ಬಲಿ ವಿಧಾನ:
ಆಶ್ಲೇಷಾ ಬಲಿಗೆ ಪ್ರಶಸ್ತವಾದ ಶುಭದಿನದಂದು ಕುಟುಂಬದ ಯಜಮಾನನು ಕುಟುಂಬದ ಸದಸ್ಯರೊಡಗೂಡಿ ಶುಚಿರ್ಭೂತನಾಗಿ, ಉಪವಾಸವಿದ್ದು, ಕ್ಷೇತ್ರ ವಿಧಿಗನುಸಾರವಾಗಿ, ವೇದ ಪಾರಂಗತರಾದ ನಿಷ್ಠಾವಂತ ವಿಪ್ರೋತ್ತಮರ ದ್ವಾರಾ ಆಶ್ಲೇಷಾ ಬಲಿಯನ್ನು ನೀಡಬೇಕು. ಸಾಮೂಹಿಕವಾಗಿ ಈ ಪೂಜೆ ನಡೆಸುವುದೂ ಇದೆ. ವ್ಯಕ್ತಿಗತವಾಗಿ ನಡೆಸುವ ಪದ್ಧತಿಯೂ ಉಂಟು. ಶ್ರೀ ಗುರು ಗಣಪತಿ, ನವಶಕ್ತ್ಯಾದಿ ದೇವತೆಗಳನ್ನು ಆವಾಹಿಸಿ ಸಂಕಲ್ಪ ಮಾಡುವುದರೊಂದಿಗೆ ಆಶ್ಲೇಷಾ ಬಲಿ ವಿಧಾನ ಆರಂಭವಾಗುತ್ತದೆ. ತಳಿರು ತೋರಣಗಳಿಂದ ಅಲಂಕೃತವಾದ ನಾಗ ಸನ್ನಿಧಿಯಲ್ಲಿ ಹರಿದ್ರಾ, ಕುಂಕುಮ, ರಂಗೋಲಿ ಪುಡಿಗಳಿಂದ ಸರ್ಪ ನವಪದಮಂಡಲವನ್ನೂ ಆಶ್ಲೇಷಾ ಬಲಿ ಮಂಡಲವನ್ನೂ ಆಕರ್ಷಕವಾಗಿ ಬರೆಯಲಾಗುತ್ತದೆ. ಸರ್ಪ ನವಪದ ಮಂಡಲದ ಕೇಂದ್ರ ಪದದಲ್ಲಿ ಶ್ರೀ ವಾಸುಕೀ ನಾಗರಾಜನಿಗೆ ಅಗ್ರಸ್ಥಾನ. ಉಳಿದ ಅಷ್ಟ ಪದಗಳಲ್ಲಿ ಅಷ್ಟಕುಲ ಸಂಜಾತರಾದ ಅನಂತ, ಶೇಷ, ಕಪಿಲ, ನಾಗ, ಕುಳಿಕ, ಶಂಖಪಾಲ, ಭೂಧರ, ತಕ್ಷಕ ಅವರ ಆವಾಹನೆ. ಆಶ್ಲೇಷಾ ಬಲಿ ಮಂಡಲದ 52 ಪದಗಳು ಸರ್ಪಕುಲದ 52 ಮಂದಿ ಸರ್ಪ ಶ್ರೇಷ್ಟರ ಆವಾಹನೆಗಾಗಿವೆ.
ಸರ್ಪಗಳ ಪತ್ನಿಯರು, ಪುತ್ರರು, ಪುತ್ರಿಯರು, ಮೊಮ್ಮಕ್ಕಳು, ಮರಿ ಮಕ್ಕಳ ಸಹಿತ ಸರ್ಪ ಸಂಕುಲವನ್ನೂ ಇಂದ್ರಾದಿ ಅಷ್ಟದಿಕ್ಪಾಲಕರನ್ನೂ ದೇವಗಣಗಳನ್ನೂ ನಾಗಗಣಗಳನ್ನೂ ಅವಾಹಿಸಲಾಗುತ್ತದೆ. ಆಶ್ಲೇಷಾ ಬಲಿ ವಿಧಾನದಂತೆ ಶ್ರೀ ವಾಸುಕೀ ನಾಗರಾಜನನ್ನೂ ಆತನ ಸರ್ಪ ಸಂಕುಲವನ್ನೂ ಧ್ಯಾನಿಸಲಾಗುತ್ತದೆ. ಅನಂತರ ಕಲ್ಪೋಕ್ತವಾಗಿ ಆಸನ, ಸ್ವಾಗತ, ಪಾದ್ಯ, ಅಘ್ರ್ಯ, ಆಚಮನೀಯ, ಮಧುಪರ್ಕ, ಆಚಮನ, ಸ್ನಾನ, ವಸನ, ಆಭರಣ, ಗಂಧ, ಪುಷ್ಪ, ಧೂಪ, ದೀಪ, ನೈವೇದ್ಯ, ವಂದನೆಗಳೆಂಬ ಷೋಡಶೋಪಚಾರ ಪೂಜೆಯನ್ನು ಸಲ್ಲಿಸಲಾಗುತ್ತದೆ. ಸಮಸ್ತ ಸರ್ಪಶಾಪ ಪರಿಹಾರಕ್ಕಾಗಿ ಕ್ಷೀರ, ಶರ್ಕರ, ಕದಳಿ, ಮಧು, ಆಜ್ಯ, ಹರಿದ್ರಾಯುಕ್ತ ಪಿಂಡಗಳನ್ನು ಸರ್ಪಗಳಿಗೆ ಮಂಡಲಗಳ ಪದಗಳಲ್ಲಿರಿಸಿ, ಸಮರ್ಪಿಸಲಾಗುತ್ತದೆ. ದೇವತೆಗಳಿಗೆ ಪ್ರಿಯವಾಗುವಂತೆ ಜ್ಯೋತಿಗಳನ್ನು ಬೆಳಗಿಸಿ ದೇದಿಪ್ಯವಾದ ವಾತಾವರಣವನ್ನು ನಿರ್ಮಿಸಲಾಗುತ್ತದೆ.
ಮಹಾಮಂಗಳಾರತಿಯನ್ನು ಬೆಳಗಿ ಮಂತ್ರ ಪುಷ್ಪಾಂಜಲಿಯನ್ನು ಸಮರ್ಪಿಸಲಾಗುತ್ತದೆ. ಆನಂತರ ಪ್ರದಕ್ಷಿಣೆ ಗೈದು, ಸಾಷ್ಟಾಂಗ ನಮಸ್ಕಾರ ಮಾಡಿ, ನಾಗದೇವತೆಯನ್ನು ಪ್ರಸನ್ನಗೊಳಿಸಿ,ಮಹಾಮಹಿಮರಾದ ಸರ್ಪಗಳೇ, ಶ್ರದ್ಧಾ ಭಕ್ತಿಯಿಂದ ಯಥಾಶಕ್ತಿಯಾಗಿ ನಡೆಸಿದ ಈ ಪೂಜೆಯನ್ನು ಅಂಗೀಕರಿಸಿ, ಬಲಿದಾನವನ್ನು ಸ್ವೀಕರಿಸಿರಿ. ಸುಪ್ರೀತರಾಗಿರಿ, ಯಜಮಾನನಿಂದ, ಆತನ ಕುಟುಂಬದವರಿಂದ, ಪೂರ್ವಜರಿಂದ ನಿಮಗಾಗಿರ ಬಹುದಾದ ಸಕಲ ಹಾನಿಯನ್ನು, ಅಪಚಾರಗಳನ್ನು ಮನ್ನಿಸಿ, ಯಜಮಾನನನ್ನು, ಆತನ ಕುಟುಂಬವನ್ನು ಸಕಲ ದುರಿತಗಳಿಂದ ರಕ್ಷಿಸಿರಿ, ಅವರಿಗುಂಟಾಗಿರುವ ಸರ್ಪ ಶಾಪವನ್ನು ನಿವೃತ್ತಿ ಪಡಿಸಿ ಅನುಗ್ರಹಿಸಿರಿ. ಕುಷ್ಠಾದಿ ರೋಗಗಳನ್ನು ನಾಶಗೊಳಿಸಿರಿ. ಆಯುಷ್ಮಂತರಾದ ಪುತ್ರ ಪೌತ್ರರ ಉತ್ತಮ ಸಂತಾನ ಭಾಗ್ಯವನ್ನು ಅನುಗ್ರಹಿಸಿ ಉತ್ತರೋತ್ತರ ಅಭಿವೃದ್ಧಿಯಾಗುವಂತೆ ಆಶಿರ್ವದಿಸಿ, ಅಷ್ಟ್ಯೆಶ್ವರ್ಯಗಳನ್ನು ದಯಪಾಲಿಸುವ ಕೃಪೆ ಮಾಡಿರಿ ಇಂತು ಪ್ರಾರ್ಥನೆಯನ್ನು ಸಲ್ಲಿಸಲಾಗುತ್ತದೆ.
ತದನಂತರ ಅಘ್ರ್ಯದಾನ, ಮತ್ತು ವಾಯನಗಳ ದಾನ ನೀಡಲಾಗುತ್ತದೆ. ಪ್ರಸಾದವನ್ನು ವಿತರಿಸಿ, ವಿಸರ್ಜನ ಪೂಜೆಯನ್ನು ನೆರವೇರಿಸಿ ಆಶ್ಲೇಷಾ ಬಲಿ ವಿಧಾನವನ್ನು ಪರಿಸಮಾಪ್ತಿಗೊಳಿಸಲಾಗುತ್ತದೆ. ಅನಂತರ ಪೂಜೆಯನ್ನು ನೆರವೇರಿಸಿದ ಆಚಾರ್ಯರನ್ನು ಫಲ, ತಾಂಬೂಲ ಯಥಾಶಕ್ತಿ ದಕ್ಷಿಣೆ ನೀಡಿ ನಮಸ್ಕರಿಸಿ, ಆರ್ಶಿರ್ವಾದ ಪಡೆಯುವುದೊಂದಿಗೆ ಆಶ್ಲೇಷಾ ಬಲಿ ಪೂಜೆಯು ಮುಕ್ತಾಯವಾಗುತ್ತದೆ.
ಆಧುನಿಕತೆಯ ಬರದಲ್ಲಿ ಪ್ರಕೃತಿದತ್ತವಾಗಿ ಉಳಿಯದೆ ಹೋದ ನಾಗ ಬನಗಳು.
ದಕ್ಷಿಣ ಕನ್ನಡ ಜಿಲ್ಲೆ ನಾಗದೇವೆರ ನೆಲೆ ಎಂಬ ಪ್ರತೀತಿ.ಇಲ್ಲಿ ನಾಗಾರಾಧನೆ ಮತ್ತು ದೈವಾರಾಧನೆಗೆ ವಿಶೆಷ ಅದ್ಯತೆ. ಪ್ರತಿಯೊಂದು ಕೂಡು ಕುಟುಂಬಿಕರಿಗೆ ಅವರದೇ ಜಾತಿಯ ಅವರದೇ ಬಳಿ,ಗೋತ್ರ ದ ನಾಗ ಬನಗಳಿವೆ.ಪೂರ್ವದಲ್ಲಿ ಕುಟುಂಬದ ಯಾಜಮಾನನೆ ನಾಗರಾಧನೆ ಮಾಡುತ್ತಿದ್ದ ನೆಂದು ನಾವು ತಿಳಿಯಬಹುದು.
ನಾಗಬನ ಎಂದರೆ ಪ್ರಕೃತಿಯಲ್ಲಿ ಮರಗೀಡ,ಬಳ್ಳಿ,ಬಿಳಳುಗಳು ಒಟ್ಟಾಗಿ ಕತ್ತಲೆಯ,ತಂಪುಲ್ಲಾ ಜಾಗದಲ್ಲಿ ತುಳುವರ ಆರಾಧ್ಯದೈವ ನಾಗ ಮತ್ತು ಬೆರ್ಮರನ್ನು ಪೂಜಿಸುವ ತಾನ.ಇದು ಹೆಚ್ಚಾಗಿ ಗದ್ದೆ ಬದಿಗೆ ತಾಗಿ ಯಾ ತೊಡುಗಳ ಬದಿಗೆ ತಾಗಿ ಇದ್ದವು.ಇನ್ನೂ ಕೆಲವೊಂದು ಗುಡ್ಡದ ಬದಿಯಲ್ಲಿ ಎತ್ತರವಾದ ಹುತ್ತದಲ್ಲಿ ಸುತ್ತ ಮುತ್ತ ಮರಗಳು ತುಂಬಿದ್ದ ಜಾಗದಲ್ಲಿ ಇದ್ದವು.ಅವಾಗ ಇದಕ್ಕೆ ಕಟ್ಟೆಗಳು ಇರಲಿಲ್ಲ.ಎಲ್ಲವೂ ನೆಲದ ಮೇಲೆ ನೆ ಇದ್ದವು. ಯಾವ ದೈವ ದೇವರಿಗೂ ಹೆದರದ ಮನುಷ್ಯ ಅವರ ಕುಟುಂಬದ ನಾಗ ಯಾ ಜಾಗದ ನಾಗಕ್ಕೆ ಹೆದರುತ್ತಾನೆ ಅನ್ನುವ ನಂಬಿಕೆ ತುಳುವರದು.ದೈವ ದೇವರ ಕೆಲಸ ಸೇವೆಗಳಿಗೆ ಬರದವ ಅವನ ಕುಟುಂಬದ ನಾಗನ ಕೆಲಸಕ್ಕೆ ಎಲ್ಲಿದ್ದರೂ ಒಡೊಡಿ ಬರುತ್ತಾನೆ.ಅಂತ ನಾಗ ಭೂಮಿಗೆ ಯಾವ ಮನುಷ್ಯ ಅಪಚಾರ ಮಾಡುತ್ತನೊ ಅವನಿಗೆ ಅಹ ಜಾಗದಲ್ಲಿ,ಕೊನೆಗೆ ಅಹ ಊರಲ್ಲೆ ನೆಲೆ ಇಲ್ಲದಗೆ ಮಾಡುತ್ತಾನೆ.
ಕೊನೆಗೆ ನಾಗನ ಪಾದ ಮುಟ್ಟಿ ತಪ್ಪು ಕಾಣಿಕೆ,ತಂಬಿಲ ಕೊಟ್ಟರೆನೆ ಮುಕ್ತಿ ಸಿಗುವುದು.ಇಂತಹ ಬಲವಾದ ನಂಬಿಕೆಯ ತುಳುನಾಡಿನಲ್ಲಿ ಇಂದು ತಂಪು ಇರುವ ಜಾಗದಲ್ಲಿ ನಾಗ ನೆಲೆ ನಿಂತಿಲ್ಲ.ಅವನಿಗೆ ತಂಪು ಜಾಗವು ಉಳಿದಿಲ್ಲ.
ಕೆಲವೊಂದು ಜನರ ಪ್ರತಿಷ್ಠೆಯ ಪಣವಾಗಿ ಮತ್ತು ವೈಧಿಕ ವಿಧಿಯ ಪರಿಣಾಮ ಇಂದು ನಾಗ ಕಾಂಕ್ರೀಟ್, ಕಲ್ಲು ಸಿಮೆಂಟ್ಗಳ ಕಟ್ಟೆಯಲ್ಲಿ ನಾಗನನ್ನು ನಾವು ನೋಡಬಹುದು.ಚಿಕ್ಕ ಮಕ್ಕಳಿಂದ ಹಿಡಿದು ಹೆಂಗಸರು ಕೂಡ ಯಾವುದೇ ಭಯವಿಲ್ಲದೆ ನಾಗನ ಕಟ್ಟೆಯನ್ನು ಮುಟ್ಟಿ, ಜೊತೆಗೆ ಸೆಲ್ಪಿ,ಫೋಟೋ ಎಲ್ಲಾವನ್ನು ಕ್ಲಿಕಿಸುತ್ತಾರೆ. ಭಯ ಭಕ್ತಿಯಿಂದ ವರ್ಷಕ್ಕೆ ಎರಡು ಸಲ ಹಾಲು ಅಭಿಷೆಕ ಪಡೆಯುತ್ತಿದ್ದ ನಾಗನಿಗೆ ಇಂದು, ಈಗ ಯಾವುದೇ ಸಮಯದಲ್ಲಿ ತನು ತಂಬಿಲ ಮಾಡಬಹುದು ಎನ್ನುವ ಜನರು.ಭಯ, ಭಕ್ತಿವಿಲ್ಲದೆ ಅಡಂಭರಕ್ಕಾಗಿ,ಪ್ರತಿಷ್ಠೆಯ ಕಣವಾಗಿ ನಾಗಾರಾಧನೆ,ನಾಗಮಂಡಲ ತುಳುನಾಡಿನಲ್ಲಿ ನಡೆಯುದನ್ನು ನೋಡಿದಾಗ ವಿಚಿತ್ರ ಅನಿಸುತ್ತಿದೆ.ನಾಗನ ಕಟ್ಟೆ ಮಾಡಿದರೂ ಅದರ ಸುತ್ತ ಮರ ನೆಡಲೂ ಹಿಂಜರಿಯುತ್ತಾರೆ,ಯಾಕೆಂದರೆ ನಾಳೆ ಮರದ ಬೇರುಗಳಿಂದ ಕಟ್ಟೆಗೆ ಹಾನಿ ಎಂಬ ಮಾತು.ಇನ್ನೂ ಕೆಲವರು ಕಟ್ಟೆಯ ಮೇಲ್ಮೈ ತಗಡು ಸೀಟು,ಅದರ ಅಂಗಳದಲ್ಲಿ ಕುಳಿತುಕೊಳ್ಳಲು ಶಾಶ್ವತ ಬೆಂಚುಗಳನ್ನು ನಿರ್ಮಿಸುವುದನ್ನು ನೋಡಿದಾಗ ನಾಗಾರಾಧನೆ ಎತ್ತ ಕಡೆ ಸಾಗುತ್ತಿದೆ ಅನ್ನುವ ಅನುಮಾನ.
ಅದರೆ ನಾಗನನ್ನು ಆರಾಧನೆ ಮಾಡುವ ಉತ್ತರ ಕನ್ನಡದ ಜನರು ಈಗಲೂ ಕೆಲವೆಡೆಗಳಲ್ಲಿ ಪ್ರಕೃತಿದತ್ತವಾಗಿಯೆ ಪೂಜೆ ಮಾಡುವುದನ್ನು ಕೆಲವು ಕಡೆ ನೋಡಬಹುದು.ಇಲ್ಲಿ ನಾಗಗಳು ಹಳ್ಳಿಗಾಡಿನ ಕಡೆ ಈಗಲೂ ದಟ್ಟವಾದ ಕಾಡುಗಳ ನಡುವೆ ಬನದಲ್ಲಿಯೆ ಇವೆ.ಮತ್ತು ನಗರ ದಲ್ಲಿಯೂ ಅದಕ್ಕೆಂದೆ ಮರಗಳು ತುಂಬಿರುವ ಬನಗಳು ಹಾಗೆಯೇ ಉಳಿದಿವೆ.ಅದರೆ ತುಳುನಾಡಿನಲ್ಲಿ ಬನದಲ್ಲಿ ಇದ್ದ ಮರಗಳನ್ನು ಕಡಿದು ಸಮತಟ್ಟು ಮಾಡಿ ನಾಗನ ಕಟ್ಟೆ ಮಾಡುವುದನ್ನು ನೋಡಿದಾಗ ಇದು ಭಕ್ತಿಯೊ ಅಥವಾ ಅಡಂಭರವೊ ಅಹ ನಾಗನೆ ಬಲ್ಲ.
– ಶಿವ ಭಟ್, ಕಹಳೆ ನ್ಯೂಸ್