ಕಡಬ: ಸರಸ್ವತೀ ವಿದ್ಯಾಲಯ ಕಡಬ ಇದರ ಪ್ರೌಢ ಹಾಗೂ ಪದವಿಪೂರ್ವ ವಿಭಾಗದ ದತ್ತು ಗ್ರಾಮವಾದ ಬಂಟ್ರ ಹಾಗೂ ಕುಟ್ರುಪಾಡಿ ಗ್ರಾಮಗಳಲ್ಲಿ ವೃಕ್ಷರೋಪಣ ಕಾರ್ಯಕ್ರಮ ನಡೆಯಿತು. ಪ್ರತಿ ಗ್ರಾಮದ 25 ಮನೆಗಳಲ್ಲಿ ಎರಡೆರಡು ಗಿಡಗಳ ಹಾಗೆ ನೆಟ್ಟು ಪೋಷಿಸುವ ಜವಾಬ್ದಾರಿ ಮನೆಯವರಿಗೆ ನೀಡಿ ಪರಿಸರ ಜಾಗೃತಿ ಮೂಡಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಬಂಟ್ರ ಗ್ರಾಮದ ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅಧ್ಯಕ್ಷತೆ ವಹಿಸಿದ್ದ ಸರಸ್ವತೀ ವಿದ್ಯಾಲಯ ಸಮೂಹ ಸಂಸ್ಥೆಗಳ ನಿರ್ದೇಶಕ ಶ್ರೀ ರಘುಚಂದ್ರ ಕೊಣಾಜೆ ಮಾತನಾಡಿ, ನಾಳೆಯ ಉತ್ತಮ ಭವಿಷ್ಯಕ್ಕಾಗಿ ಪರಿಸರವನ್ನು ಉತ್ತಮ ರೀತಿಯಲ್ಲಿ ಪೋಷಿಸುವುದು ನಮ್ಮೆಲ್ಲರ ಜವಾಬ್ಧಾರಿ ಎಂದರು.
ಬಂಟ್ರ ಗ್ರಾಮವಿಕಾಸ ಸಮಿತಿಯ ಅಧ್ಯಕ್ಷ ಹರೀಶ್ ಕೋಡಂದೂರು, ಸಂಸ್ಥೆಯ ಸಂಚಾಲಕ ವೆಂಕಟ್ರಮಣ ರಾವ್ ಮಂಕುಡೆ, ವಾಸುದೇವ ಬೈಪಡಿತ್ತಾಯ, ದಿನೇಶ್ ಕೊಲ್ಲೆಸಾಗು, ಉಪಸ್ಥಿತರಿದ್ದರು. ಪ್ರೌಢವಿಭಾಗದ ಮುಖ್ಯ ಮಾತಾಜಿ ಶ್ರೀಮತಿ ಶೈಲಶ್ರೀ ರೈ ಸ್ವಾಗತಿಸಿ, ದೈಹಿಕ ಶಿಕ್ಷಕ ಲಕ್ಷ್ಮೀಶ ಗೌಡ ಆರಿಗ ವಂದಿಸಿ, ಸಹಶಿಕ್ಷಕಿ ಸೌಮ್ಯ ಕೆ ಕಾರ್ಯಕ್ರಮ ನಿರೂಪಿಸಿದರು.
ಕುಟ್ರುಪಾಡಿ ಗ್ರಾಮದ ಕೇಪು ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಸ್ವತೀ ವಿದ್ಯಾಲಯ ಸಮೂಹ ಸಂಸ್ಥೆಗಳ ನಿರ್ದೇಶಕ ಶ್ರೀ ಶಿವಪ್ರಸಾದ್ ಮೈಲೇರಿ ವಹಿಸಿದ್ದರು. ಅತಿಥಿಯಾಗಿ ಆಗಮಿಸಿದ ಶ್ರೀ ಲಕ್ಷ್ಮೀಜನಾರ್ಧನ ದೇವಸ್ಥಾನದ ಆಡಳಿತ ವ್ಯವಸ್ಥಾಪಕರಾದ ಸುರೇಶ್ ದೆಂತಾರು ಉಪಸ್ಥಿತರಿದ್ದರು.