Monday, November 25, 2024
ಸುದ್ದಿ

ರಾಜ್ಯದ ಹಲವು ಕಡೆ ವ್ಯಾಪಕ ಮಳೆ: ಶಾಲಾ ಕಾಲೇಜುಗಳಿಗೆ ರಜೆ – ಕಹಳೆ ನ್ಯೂಸ್

ಬೆಂಗಳೂರು: ಅರಬ್ಬೀ ಸಮುದ್ರದಲ್ಲಿ ವ್ಯಾಪಕ ಗಾಳಿಯಿಂದಾಗಿ ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಹಾರಾಷ್ಟ್ರದಲ್ಲಿ ಭರ್ಜರಿ ಮಳೆ ಪರಿಣಾಮ ಅಣೆಕಟ್ಟೆಯಿಂದ ಹೊರಬಿಡಲಾಗುತ್ತಿರುವ ನೀರು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರವಾಹ ಸೃಷ್ಟಿಸಿದ್ದು, ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಉಲ್ಬಣಿಸುವ ಸಾಧ್ಯತೆಗಳಿವೆ.

ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ತಾಲೂಕುಗಳು, ಚಿಕ್ಕಮಗಳೂರು, ಕೊಡಗು, ಬಾಗಲಕೋಟ, ಧಾರವಾಡ, ಸಕಲೇಶಪುರ ತಾಲೂಕುಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಬೆಳಗಾವಿ ಹೊರವಲಯದ ಕಾಕತಿ ಬಳಿ ಇಳಿಜಾರು ಪ್ರದೇಶದಲ್ಲಿ ನೀರು ತುಂಬಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ. ಸದ್ಯಕ್ಕೆ ಭಾರೀ ವಾಹನಗಳಷ್ಟೆ ಸಂಚರಿಸುತ್ತಿವೆ. ಸರಕಾರಿ ಬಸ್ ಗಳ ಸಂಚಾರ ತಡೆಹಿಡಿಯಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಹಾರಾಷ್ಟ್ರದಿಂದ ಹರಿದುಬರುತ್ತಿರುವ ಭಾರಿ ಪ್ರಮಾಣದ ಕೃಷ್ಣಾ ನದಿ ನೀರಿನಿಂದ ಚಿಕ್ಕೋಡಿ, ಅಥಣಿ ಮತ್ತು ರಾಯವಾಗ ತಾಲೂಕಿನ ಗ್ರಾಮಗಳು ಜಲಾವೃತಗೊಂಡ ಬೆನ್ನಲ್ಲೇ ಈಗ ಸಾರಿಗೆ ಸಂಪರ್ಕ ಕಡಿತಗೊಂಡಿರುವುದರಿಂದ ಇಡೀ ಜಿಲ್ಲೆ ಮುಳುಗುವ ಪರಿಸ್ಥಿತಿ ಎದುರಿಸುತ್ತಿದೆ. ವೇದಗಂಗಾ ನದಿ ಪ್ರವಾಹದಲ್ಲಿ ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಯಮಗರ್ಣಿ ಬಳಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಜಲಾವೃತಗೊಂಡಿದೆ. ಕೊಲ್ಲಾಪುರ-ಬೆಳಗಾವಿ ಸಂಪರ್ಕ ಕಡಿತಗೊಂಡಿದೆ. ಘಟಪ್ರಭಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಗೋಕಾಕ -ಸಂಕೇಶ್ವರ ರಸ್ತೆ ಲೊಳಸೂರ ಬ್ರಿಜ್ ಮುಳುಗಡೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಲೆನಾಡಿನಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಶೃಂಗೇರಿ ರಸ್ತೆ ಸಂಚಾರ ಮಾರ್ಗ ಬಂದ್ ಆಗಿದೆ. ಕೊಪ್ಪ ತಾಲೂಕಿನ ಹುಲ್ಲಿನಗದ್ದೆಯಲ್ಲಿರುವ ಸೇತುವೆ ಮೇಲೆ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿರುವ ಕಾರಣ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ಕೊಡಗಿನಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ನಾಪೋಕ್ಲು ಮತ್ತು ಭಾಗಮಂಡಲ ರಸ್ತೆ ನದಿಯಂತಾಗಿದೆ. ಹಟ್ಟಿಹೊಳೆ ಬಳಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ, ಮುಂಜಾಗೃತ ಕ್ರಮಾವಾಗಿ ಜಿಲ್ಲೆಯಾದ್ಯಂತ ಅಂಗನವಾಡಿ ಮತ್ತು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕೂಡ ನಿರಂತರ ಮಳೆ ಹಿನ್ನೆಲೆಯಲ್ಲಿ ಶಾಲೆ ಕಾಲೇಜುಗಳಿಗೆ ರಜೆಘೋಷಿಸಲಾಗಿದೆ.