ಬೆಂಗಳೂರು: ಸೆಪ್ಟೆಂಬರ್ ಒಂದರ ನಂತರ ಪ್ಲಾಸ್ಟಿಕ್ ಉತ್ಪಾದಿಸುವ ಹಾಗೂ ಉತ್ಪನ್ನ ಮಾರಾಟ ಮಾಡುವ ಮಳಿಗೆಗಳಿಗೆ ಭಾರೀ ಪ್ರಮಾಣದ ದಂಡ ವಿಧಿಸಲಾಗುವುದು. ನಂತರವೂ ಪ್ಲಾಸ್ಟಿಕ್ ಬಳಕೆ ಮುಂದುವರೆಸಿದರೆ ಅಂತಹ ಮಳಿಗೆಗಳ ಪರವಾನಗಿ ರದ್ದುಗೊಳಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ವಿಜಯೇಂದ್ರ ತಿಳಿಸಿದರು.
ಸೆ.1ರಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ತೀರ್ಮಾನಿಸಿದ್ದೇವೆ. ಹಾಗಾಗಿ ಸೆ.1ರ ನಂತರ ಪ್ಲಾಸ್ಟಿಕ್ ಉತ್ಪನ್ನ ಬಳಕೆ ಮಾಡಿದರೆ ಮೊದಲ ಬಾರಿಗೆ ಒಂದು ಲಕ್ಷ ದಂಡ, 2 ಹಾಗೂ 3ನೆ ಬಾರಿಯೂ ವ್ಯಾಪಾರ ಮಾಡಿದರೆ ಅತೀ ಹೆಚ್ಚು ದಂಡ ಹಾಕಲಾಗುವುದು. ಇದಕ್ಕೂ ಬಗ್ಗದಿದ್ದರೆ ಕೆಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಪ್ಲಾಸ್ಟಿಕ್ ಉತ್ಪನ್ನ ಮಾರಾಟ ಮಾಡುವವರ ವ್ಯಾಪಾರ ಪರವಾನಗಿ ರದ್ದುಪಡಿಸಲಾಗುವುದು ಎಂದು ಎಚ್ಚರಿಸಿದರು.
ಇತ್ತೀಚೆಗೆ ನಗರದಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗಿದ್ದು, ಅತ್ತ ಕಡೆ ಗಮನ ಕೊಟ್ಟಿದ್ದರ ಕಾರಣ ಪ್ಲಾಸ್ಟಿಕ್ ಉತ್ಪನ್ನ ಘಟಕಗಳ ಮೇಲಿನ ದಾಳಿ ಕಡಿಮೆಯಾಗಿತ್ತು. ಇನ್ನು ಮುಂದೆ ದಾಳಿ ತೀವ್ರಗೊಳ್ಳಲಿದೆ ಎಂದು ಹೇಳಿದರು. ನಗರದಲ್ಲಿ ಇದುವರೆಗೆ ನಾಲ್ಕು ಸಾವಿರಕ್ಕೂ ಹೆಚ್ಚು ಡೆಂಘೀ ಪ್ರಕರಣಗಳು ದಾಖಲಾಗಿವೆ. 50 ವಾರ್ಡ್‍ಗಳಲ್ಲಿ ಡೆಂಘೀ ಉಲ್ಬಣವಾಗಿದೆ. ಒಟ್ಟಾರೆ ಡೆಂಘೀ ರೋಗ ನಿಯಂತ್ರಣ ಮಾಡಲು ಹಾಗೂ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧಕ್ಕೆ ನಾವು ಪಣ ತೊಟ್ಟಿದ್ದೇವೆ ಎಂದು ವಿಜಯೇಂದ್ರ ತಿಳಿಸಿದರು.