ಬಂಟ್ವಾಳ: ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿರುವುದರಿಂದ ನೇತ್ರಾವತಿ ನದಿಯ ನೀರಿನ ಮಟ್ಟ ಏರಿಕಯಾಗುತ್ತಿದೆ. ಈ ಹಿನ್ನಲೆಯಲ್ಲಿ ಬಂಟ್ವಾಳ ತಾಲೂಕಿನ ಕೆಲ ತಗ್ಗು ಪ್ರದೇಶಗಳಿಗೆ ಹಾಗೂ ಎ.ಎಂ.ಆರ್ ಡ್ಯಾಂ ಹಾಗೂ ಇನ್ನಿತರ ಅಪಾಯದ ಪ್ರದೇಶಗಳಿಗೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹಾಗೂ ಬಂಟ್ವಾಳ ತಹಶೀಲ್ದಾರ್ ರಶ್ಮಿ. ಎಸ್.ಆರ್, ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ ರೇಖಾ ಶೆಟ್ಟಿ ಬೇಟಿ ನೀಡಿದರು.
ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನೆರೆ ಭೀತಿಯಿರುವುದರಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಮತ್ತು ತಾಲೂಕಿನಾದ್ಯಂತ ಹೈ ಅಲರ್ಟ್ ಘೋಷಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನೇತ್ರಾವತಿ ನದಿಯಲ್ಲಿ ಬೆಳಗ್ಗೆ 7.7 ಮೀಟರ್ ಇದ್ದ ನೀರಿನ ಮಟ್ಟ ಸಂಜೆಯ ವೇಳೆ 7.9 ಮೀಟರ್ ಏರಿಕೆಯಾಗಿದೆ. ನೇತ್ರಾವತಿ ನದಿಯ ನೀರಿನ ಮಟ್ಟ 8.5 ಆಗಿದ್ದು ಒಂದು ವೇಳೆ ರಾತ್ರಿಯ ವೇಳೆ ಘಟ್ಟ ಪ್ರದೇಶದಲ್ಲಿ ಮಳೆ ಜೊತೆ ಗಾಳಿಯೂ ಜಾಸ್ತಿಯಾಗಿ ಬಂದರೆ ಮತ್ತಷ್ಟು ನೀರಿನ ಮಟ್ಟ ಹೆಚ್ಚಾಗುವ ಸಾಧ್ಯತೆಗಳಿವೆ.
ಪಾಣೆಮಂಗಳೂರು ಮಿಲಿಟರಿ ಗ್ರೌಂಡ್ನಲ್ಲಿರುವ ಸುಮಾರು 17 ಮನೆಗಳನ್ನು ಹಾಗೂ ಇನ್ನಿತರ ಕಡೆ ತಗ್ಗು ಪ್ರದೇಶಗಳಲ್ಲಿ ಇರುವ ಮನೆಗಳನ್ನು ನೆರೆಯ ಭೀತಿಯಿಂದ ಸ್ಥಳಾಂತರ ಮಾಡಲಾಗಿದೆ ಎಂದು ಬಂಟ್ವಾಳ ತಹಶೀಲ್ದಾರ್ ರಶ್ಮಿ. ಎಸ್.ಆರ್.ತಿಳಿಸಿದ್ದಾರೆ.
ಜೊತೆಗೆ ಮುಂಜಾಗ್ರತಾ ಕ್ರಮವಾಗಿ ಬಂಟ್ವಾಳ ಪ್ರವಾಸಿ ಮಂದಿರ ಹಾಗೂ ಪಾಣೆಮಂಗಳೂರು ಶಾಲೆಯನ್ನು ಗಂಜಿ ಕೇಂದ್ರವಾಗಿ ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ.