Recent Posts

Monday, January 20, 2025
ಸುದ್ದಿ

ವಿವೇಕಾನಂದ ಕಾಲೇಜಿನಲ್ಲಿ ನೇಚರ್ ಕ್ಲಬ್ ಉದ್ಘಾಟನೆ : ಪರಿಸರದ ಅಸಮತೋಲನಕ್ಕೆ ಮಾನವನ ದೌರ್ಜನ್ಯವೇ ಕಾರಣ : ವಸಂತಿ – ಕಹಳೆ ನ್ಯೂಸ್

ಪುತ್ತೂರು : ಪ್ರಕೃತಿಯು ಜೀವಿ ಮತ್ತು ನಿರ್ಜೀವಿಗಳ ಸಂಯೋಜನೆಯಿಂದ ಉಂಟಾಗಿದೆ. ಪರಿಸರದಲ್ಲಿ ಇಂದು ಅಸಮತೋಲನವನ್ನು ಕಾಣುತ್ತಿದ್ದೇವೆ. ಸರಿಯಾದ ಸಮಯದಲ್ಲಿ ಮಳೆ ಮತ್ತು ಬಿಸಿಲು ಬರುತ್ತಿಲ್ಲ, ಇದಕ್ಕೆ ಕಾರಣ ಮನುಷ್ಯ ಪರಿಸರದ ಮೇಲೆ ಮಾಡುವ ದೌರ್ಜನ್ಯವಾಗಿದೆ ಎಂದು ಪುತ್ತೂರಿನ ರಾಮಕೃಷ್ಣ ಪ್ರೌಢ ಶಾಲೆಯ ನಿವೃತ್ತ ವಿಜ್ಞಾನ ಅಧ್ಯಾಪಕಿ ವಸಂತಿ ಕೆ. ಅಭಿಪ್ರಾಯಪಟ್ಟರು.

ಇವರು ಮಂಗಳವಾರ ವಿವೇಕಾನಂದ ಕಾಲೇಜಿನ ನೇಚರ್ ಕ್ಲಬ್‍ನ 2019-20 ಸಾಲಿನ ವಾರ್ಷಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು. ಸ್ವಚ್ಛ ಭಾರತ ಎಂಬ ಯೋಜನೆಯಿಂದ ಸ್ವಲ್ಪ ಮಟ್ಟಿನಲ್ಲಿ ಸ್ವಚ್ಛತಾ ಕಾರ್ಯ ನಡೆದಿದೆ. ಆದರೆ ಇದುವರೆಗೂ ಸಂಪೂರ್ಣವಾದ ಕಸ ವಿಲೇವಾರಿ ಕಾರ್ಯ ನಡೆಯಲಿಲ್ಲ. ಪ್ಲಾಸ್ಟಿಕ್ ಪುನರ್‍ಬಳಕೆ ಮಾಡುವ ವಿಧಾನವು ಉತ್ತಮ ರೀತಿಯಲ್ಲಿ ಜಾರಿಗೆ ಬರಬೇಕು. ಇದರ ಬಗ್ಗೆ ದೇಶದ ಜನರಲ್ಲಿ ಪ್ರಜ್ಞೆ ಮೂಡಬೇಕು. ಅದರಿಂದಾಗಿ ಕಸದಿಂದ ರಸ ಎನ್ನುವ ಪರಿಕಲ್ಪನೆ ಯಶಸ್ವಿಯಾಗುವುದು ಎಂದು ತಿಳಿಸಿದರು. ಮನುಷ್ಯ ತನ್ನ ಲಾಭಕ್ಕಾಗಿ ಮರಗಳನ್ನು ನಾಶ ಮಾಡುತ್ತಿದ್ದಾನೆ. ಇದರಿಂದ ಮುಂದಿನ ಜನಾಂಗಕ್ಕೆ ಉಸಿರಾಡಲು ಆಮ್ಲಜನಕದ ಕೊರತೆ ಉಂಟಾಗಬಹುದು. ಆದುದರಿಂದ ಗಿಡಗಳನ್ನು ನೆಡುವುದರ ಮೂಲಕ ಮನೆಗೊಂದು ಮರ ಊರಿಗೊಂದು ವನ ಎಂಬ ಸಂಕಲ್ಪವನ್ನು ಯುವಜನರು ಮಾಡಬೇಕಾಗಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಕಾಳಜಿ ಹಾಗೂ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು. ನಿಸರ್ಗದಲ್ಲಿರುವ ಸಸ್ಯಗಳ ಬಗ್ಗೆ ವೈಜ್ಞಾನಿಕವಾದ ಸಂಶೋಧನೆಯನ್ನು ನಡೆಸುವ ಮನೋಭಾವ ಮುಖ್ಯ. ಆಗ ಮಾತ್ರವೇ ಜನರಿಗೆ ಹೊಸ ಹೊಸ ವಿಷಯವನ್ನು ನೀಡಲು ಸಾಧ್ಯ. ಆಗ ಮುಂದಿನ ಸಮಾಜಕ್ಕಾಗಿ ಹೊಸ ಕೊಡುಗೆಯನ್ನು ನೀಡಬಹುದು. ಹಿಂದಿನ ಕಾಲದಲ್ಲಿ ನಾಗಬನ, ಕೆರೆಗಳು, ಕಾಡುಗಳನ್ನು ದೇವರ ಹೆಸರಿನಲ್ಲಿ ಸಂರಕ್ಷಿಸುತ್ತಿದ್ದರು. ಆದರೆ ಇಂದು ಪರಿಸರದ ಜೊತೆಗಿರುವ ಸಂಬಂಧ ಕಡಿಮೆಯಾಗಿದೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವೇದಿಕೆಯಲ್ಲಿ ನೇಚರ್ ಕ್ಲಬ್‍ನ ಕಾರ್ಯದರ್ಶಿಗಳಾದ ಅನುಶ್ರೀ ಭಟ್ ಎಸ್. ಹಾಗೂ ವಿಘ್ನೇಶ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ವೀಣಾ ಶಾರದಾ ಹಾಗೂ ಬಳಗದವರು ಪ್ರಾರ್ಥಿಸಿದರು. ನೇಚರ್ ಕ್ಲಬ್‍ನ ಅಧ್ಯಕ್ಷೆ ಅಧಿತಿ ಇ. ಸ್ವಾಗತಿಸಿದರು. ನೇಚರ್ ಕ್ಲಬ್‍ನ ಸಂಯೋಜಕ ಡಾ. ಶ್ರೀಕೃಷ್ಣ ಗಣರಾಜ್ ಭಟ್ ಪ್ರಾಸ್ತಾವಿಕ ಮಾತುಗಳಾನ್ನಾಡಿದರು. ಸಸ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಡಾ.ಸ್ಮಿತಾ ವಂದಿಸಿದರು. ವಿದ್ಯಾರ್ಥಿಗಳಾದ ಸುನಯನ ಎ.ಜಿ. ಮತ್ತು ವಾಣಿ ಕೆ. ಕಾರ್ಯಕ್ರಮ ನಿರೂಪಿಸಿದರು.