Tuesday, January 21, 2025
ಸುದ್ದಿ

ವರುಣನಬ್ಬರಕ್ಕೆ ರಾಜ್ಯದ ಸುಮಾರು 15 ಜಿಲ್ಲೆಗಳಲ್ಲಿ ಜನಜೀವನ ತತ್ತರ – ಕಹಳೆ ನ್ಯೂಸ್

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದಾಗಿ ಉತ್ತರದಲ್ಲಿ ಕೃಷ್ಣೆ ಮತ್ತು ಅದರ ಉಪ ನದಿಗಳಲ್ಲಿ ಕಾಣಿಸಿಕೊಂಡಿರುವ ಪ್ರವಾಹ ಹಾಗೂ ಕರಾವಳಿ, ಮಲೆನಾಡು ಸೇರಿ ಉಳಿದೆಡೆ ವರುಣನಬ್ಬರಕ್ಕೆ ರಾಜ್ಯದ ಸುಮಾರು 15 ಜಿಲ್ಲೆಗಳಲ್ಲಿ ಜನಜೀವನ ತತ್ತರಿಸಿದೆ. ಮಹಾರಾಷ್ಟ್ರದ ಡ್ಯಾಂಗಳಿಂದ ಹರಿದುಬರುತ್ತಿರುವ ಭಾರೀ ಪ್ರಮಾಣದ ನೀರಿನಿಂದಾಗಿ ಕೃಷ್ಣಾ, ಘಟಪ್ರಭಾ ನದಿಗಳ ರುದ್ರನರ್ತನಕ್ಕೆ ಬೆಳಗಾವಿ, ಬಾಗಲಕೋಟೆಯಲ್ಲಿ ಮತ್ತೆ ನೂರಾರು ಗ್ರಾಮಗಳು ಜಲಾವೃತವಾಗಿವೆ. ಬಾಗಲಕೋಟೆಯ ಮಿರ್ಜಿ ಗ್ರಾಮದಲ್ಲಿ 150ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ, ಜನಜೀವನ ಸಂಕಷ್ಟಕ್ಕೆ ಸಿಲುಕಿದೆ. ಮಾರ್ಕಾಂಡೇಯ ಡ್ಯಾಂ ಭರ್ತಿಯಾಗಿ ಬೆಳಗಾವಿಯ ಗೋಕಾಕ ಪಟ್ಟಣ ಬಹುತೇಕ ಜಲದಿಗ್ಬಂಧನಕ್ಕೊಳಗಾಗಿದ್ದು, ಸವದತ್ತಿ ತಾಲೂಕಿನ 20ಕ್ಕೂ ಹೆಚ್ಚು ಗ್ರಾಮಗಳಿಗೆ ಮಲಪ್ರಭಾ ನೀರು ನುಗ್ಗಿದೆ. ಈಗಾಗಲೇ ರಾಜ್ಯಾದ್ಯಂತ ಸುಮಾರು 28 ಸಾವಿರಕ್ಕೂ ಹೆಚ್ಚು ಮಂದಿ ಸ್ಥಳಾಂತರಗೊಂಡಿದ್ದು, ಮತ್ತಷ್ಟುಮಂದಿಯ ಸ್ಥಳಾಂತರಕ್ಕೆ ಎನ್‌ಡಿಆರ್‌ಎಫ್‌, ಸೇನೆ, ಪೊಲೀಸರ ಅವಿರತ ಶ್ರಮ ಮುಂದುವರಿದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲೂ ವರುಣನಬ್ಬರ ಮುಂದುವರಿದಿದ್ದು, ಈ ಮಲೆನಾಡು ಜಿಲ್ಲೆಗಳ ಪ್ರಮುಖ ರಸ್ತೆ, ಸೇತುವೆಗಳು ಜಲಾವೃತಗೊಂಡಿವೆ. ಕೊಡಗಿನ ಭಾಗಮಂಡಲದಲ್ಲಿ ನೀರಿನ ಮಟ್ಟ ಮತ್ತಷ್ಟುಏರಿಕೆಯಾಗಿದ್ದು, ನಾಪೋಕ್ಲು ರಸ್ತೆಯಲ್ಲಿ ಬೋಟ್‌ ಬಳಸಿ ನೆರೆ ದಾಟುವ ಸ್ಥಿತಿ ನಿರ್ಮಾಣವಾಗಿದೆ. ಭಾಗಮಂಡಲ-ತಲಕಾವೇರಿ ರಸ್ತೆ ಮೇಲೂ ನೀರು ಹರಿದ ಪರಿಣಾಮ ವಾಹನ ಸಂಚಾರ ಸ್ಥಗಿತಗೊಂಡಿದೆ. ಈ ನಡುವೆ, ಅಲ್ಲಲ್ಲಿ ಗುಡ್ಡಕುಸಿದು ಹಲವು ಮನೆಗಳಿಗೂ ಹಾನಿಯಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಕೆಲ ಕುಟುಂಬಗಳನ್ನು ಸುರಕ್ಷಿತ ಪ್ರದೇಶಕ್ಕೆ ರವಾನಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅದೇ ರೀತಿ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಂಗಳವಾರಕ್ಕೆ ಹೋಲಿಸಿದರೆ ಮಳೆ ತುಸು ಕಡಿಮೆಯಾಗಿದ್ದರೂ ಪ್ರಮುಖ ನದಿಗಳಾದ ಕುಮಾರಧಾರ, ಕಾಳಿ, ಗಂಗಾವಳಿ, ಚಕ್ರಾ ಉಕ್ಕಿಹರಿಯುತ್ತಿರುವ ಹಿನ್ನೆಲೆಯಲ್ಲಿ ಪ್ರವಾಹ ಸ್ಥಿತಿ ಮುಂದುವರಿದಿದೆ. ಉತ್ತರಕನ್ನಡವನ್ನು ಹೊರಜಿಲ್ಲೆಗಳೊಂದಿಗೆ ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ ನೀರು ಆವರಿಸಿಕೊಂಡಿದ್ದು, ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನದಿಪಾತ್ರದ 7400 ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಹೊರಗಿನವರಿಗೆ ಜಿಲ್ಲೆಯ ಪ್ರವೇಶ ನಿರ್ಬಂಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಇನ್ನು ಧಾರವಾಡ, ಹಾವೇರಿಯಲ್ಲಿ ಕಳೆದ ಮೂರು ದಿನಗಳ ಮಳೆಗೆ ಸುಮಾರು 1500ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಮಲಪ್ರಭಾ ನದಿಗೆ ನೀರು ಬಿಟ್ಟಹಿನ್ನೆಲೆಯಲ್ಲಿ ಗದಗದಲ್ಲಿ ನದಿಪಾತ್ರದ ಗ್ರಾಮಗಳಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಧಾರವಾಡದಲ್ಲಿ ಬೆಣ್ಣಿಹಳ್ಳ- ತುಪರಿಹಳ್ಳಗಳು ಉಕ್ಕಿ ಹರಿದು ನವಲಗುಂದ ಕೆಲವೆಡೆ ರಸ್ತೆಸಂಚಾರ ಅಸ್ತವ್ಯಸ್ತಗೊಂಡಿದೆ.

ತುಂಗಭದ್ರಾ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದುಬರುತ್ತಿರುವ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಮಲೆಬೆನ್ನೂರಿನ ಉಕ್ಕಡಗಾತ್ರಿ ದೇವಸ್ಥಾನಕ್ಕೆ ನೀರು ನುಗ್ಗುವ ಆತಂಕ ನಿರ್ಮಾಣವಾಗಿದೆ. ಕಬಿನಿ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಹೊರಬಿಡುವ ಸಾಧ್ಯತೆ ಹಿನ್ನೆಲೆಯಲ್ಲಿ ಎಚ್‌.ಡಿ.ಕೋಟೆ ಮತ್ತು ಪಿರಿಯಾಪಟ್ಟಣ ತಾಲೂಕಿನಲ್ಲಿ ಕಬಿನಿ ನದಿ ಪಾತ್ರದಲ್ಲಿ ಪ್ರವಾಹದ ಆತಂಕ ಶುರುವಾಗಿದೆ.

ಕಳೆದ ಕೆಲ ದಿನಗಳಿಂದ ಭಾರೀ ಮಳೆಗೆ ಸಾಕ್ಷಿಯಾಗುತ್ತಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಭದ್ರೆ, ಹೇಮಾವತಿಯ ಅಬ್ಬರಕ್ಕೆ ಮೂಡಿಗೆರೆ, ಕೊಪ್ಪ, ಶೃಂಗೇರಿ ಮತ್ತು ಎನ್‌.ಆರ್‌.ಪುರ ತಾಲೂಕುಗಳ ತಗ್ಗುಪ್ರದೇಶಗಳ ನೂರಾರು ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಬಾಳೆಹೊನ್ನೂರು ಪೇಟೆಯಲ್ಲಿ ಅನೇಕ ಅಂಗಡಿ, ಮಳಿಗೆಗಳಿಗೆ ನೀರು ನುಗ್ಗಿದ್ದು, ಚಿಕ್ಕಮಗಳೂರು-ಹೊರನಾಡು ಸಂಪರ್ಕಿಸುವ ಎರಡೂ ರಸ್ತೆಗಳು ಸೇರಿ ಹಲವೆಡೆ ಸಂಚಾರ ಬಂದ್‌ ಆಗಿದೆ. ಚಾರ್ಮಾಡಿ ಘಾಟ್‌ನಲ್ಲೂ 7 ಕಡೆ ಗುಡ್ಡಕುಸಿದು ಗುರುವಾರ ಮಧ್ಯರಾತ್ರಿವರೆಗೆ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಶಿವಮೊಗ್ಗದಲ್ಲಿ ಶರಾವತಿ, ತುಂಗಾ, ಭದ್ರಾ ಸೇರಿ ಹಲವು ನದಿಗಳು ಉಕ್ಕಿಹರಿಯುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರ, ತೀರ್ಥಹಳ್ಳಿಯಲ್ಲಿ ತಗ್ಗುಪ್ರದೇಶಗಳಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದೆ.