ಪುತ್ತೂರು: ಅರ್ಥಶಾಸ್ತ್ರವು ಒಂದು ಪ್ರಬುದ್ಧ ಸಮಾಜ ವಿಜ್ಞಾನ. ಅದು ಮಾನವನ ಆರ್ಥಿಕ ವರ್ತನೆ ಹೇಗೆ ಸಮಾಜದಿಂದ ಪ್ರಭಾವಿತಗೊಳ್ಳುತ್ತದೆ ಮತ್ತು ಸಮಾಜದ ರೀತಿ ರಿವಾಜುಗಳು ವ್ಯಕ್ತಿಯ ಚಟುವಟಿಕೆಗಳನ್ನು ಹೇಗೆ ಪ್ರಭಾವಿತಗೊಳಿಸುತ್ತದೆ ಎನ್ನುವುದನ್ನು ತಿಳಿಸುತ್ತದೆ ಎಂದು ಸಂತ ಫಿಲೋಮಿನಾ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಹೇಳಿದರು.
ಕಾಲೇಜಿನ ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದ ಆಶ್ರಯದಲ್ಲಿ ಆಗಸ್ಟ್ 6 ರಂದು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಸಭಾಂಗಣದಲ್ಲಿ ಆಯೋಜಿಸಲಾದ ಫ್ರೆಶರ್ಸ್ ಡೇ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಅರ್ಥಶಾಸ್ತ್ರಜ್ಞರಿಗೆ ವಿಶ್ವ ಮಟ್ಟದಲ್ಲಿಯೂ ಬೇಡಿಕೆಯಿದೆ. ಮೈಸೂರು ಮೂಲದ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್ ಅಂತರ್‍ರಾಷ್ಟ್ರೀಯ ಹಣಕಾಸು ಸಂಸ್ಥೆಯಾದ ಐಎಮ್‍ಎಫ್‍ನಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ. ಜ್ಞಾನ ಸಂಪತ್ತು ಮತ್ತು ಜೀವನ ಮೌಲ್ಯಗಳು ಮಾನವನ ಭವಿಷ್ಯದ ದಿಕ್ಕನ್ನು ನಿರ್ಧರಿಸಬಲ್ಲವು. ಸಂಸ್ಥೆಯ ನೀತಿ ನಿಬಂಧನೆಗಳನ್ನು ಪಾಲಿಸುವುದರೊಂದಿಗೆ ಗುಣಾತ್ಮಕ ಶಿಕ್ಷಣದ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ಎಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ ಮಾತನಾಡಿ, ನಾವು ಜೀವನದ ಪ್ರತಿ ಕ್ಷಣದಲ್ಲಿಯೂ ಹೊಸ ಹೊಸ ವಿಚಾರಗಳನ್ನು ಕಲಿತುಕೊಳ್ಳಲು ಸಾಧ್ಯವಿದೆ. ಶಿಕ್ಷಣದೊಂದಿಗೆ ಸಂಸ್ಕಾರಗಳನ್ನೂ ಕಲಿತುಕೊಳ್ಳುವುದು ಅತಿ ಅವಶ್ಯಕ. ಅರ್ಥಶಾಸ್ತ್ರದ ಪರಿಣಾಮಕಾರಿ ಕಲಿಕೆಯಲ್ಲಿ ಉತ್ತಮ ಭಾಷಾ ಜ್ಞಾನದ ಅಗತ್ಯವೂ ಇದೆ. ಪ್ರಸ್ತುತ ಸನ್ನಿವೇಶದಲ್ಲಿ ಕಲಾ ವಿಭಾಗಗಳಲ್ಲಿ ದಾಖಲಾತಿ ಹೊಂದುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಮುಂದೊಂದು ದಿನ ಕಲಾ ವಿಷಯಗಳ ಅಧ್ಯಯನಕ್ಕೂ ಹೆಚ್ಚಿನ ಬೇಡಿಕೆ ಬರಬಹುದು ಎಂದರು.
ವಿಭಾಗದ ಸಂಯೋಜಕ ಪ್ರೊ. ದಿನಕರ ರಾವ್ ಮಾತನಾಡಿ, ವೃತ್ತಿ ಬದುಕಿನ ಆಯ್ಕೆಯ ಸಂದರ್ಭದಲ್ಲಿ ನಾನಾ ತರಹದ ಸವಾಲುಗಳು ಎದುರಾಗುವುದು ಸರ್ವೇಸಾಮಾನ್ಯ. ಸ್ನಾತಕೋತ್ತರ ಶಿಕ್ಷಣದ ಸಂದರ್ಭದಲ್ಲಿಯೇ ಈ ಕುರಿತು ಅರಿತುಕೊಳ್ಳಬೇಕು. ಜ್ಞಾನಾರ್ಜನೆಯೊಂದಿಗೆ ಕೌಶಲ್ಯಾರ್ಜನೆಯೂ ಬಹಳ ಮುಖ್ಯ. ಸ್ನಾತಕೋತ್ತರ ಪದವೀಧರರು ಅಧ್ಯಾಪನ ವೃತ್ತಿಯನ್ನಲ್ಲದೆ ಇತರ ಅವಕಾಶಗಳನ್ನೂ ಕಂಡುಕೊಳ್ಳಬಹುದು ಎಂದರು.
ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಸಂಧ್ಯಾ ಎಚ್, ಪ್ರದೀಪ್ ಕೆ ಎಸ್ ಮತ್ತು ಬಿ ಟಿ ಸೌಮ್ಯ ಉಪಸ್ಥಿತರಿದ್ದರು.