Thursday, January 23, 2025
ಸುದ್ದಿ

ಫಿಲೋಮಿನಾ ಗಣಿತಶಾಸ್ತ್ರ ಸ್ನಾತಕೋತ್ತರ ವಿಭಾಗದಲ್ಲಿ ಫ್ರೆಶರ್ಸ್ ಡೇ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು: ಪದ ನಿಮಿತ್ತ ಬರುವ ಗೌರವಕ್ಕಿಂತ ಪ್ರತಿಭೆಯ ಮೂಲಕ ಸಿಗುವ ಗೌರವವೇ ಶ್ರೇಷ್ಠ. ಸಮಸ್ಯೆಗಳನ್ನು ಸೃಷ್ಟಿ ಮಾಡುವುದಕ್ಕಿಂತ ಸಮಸ್ಯೆಗಳನ್ನು ಪರಿಹರಿಸುವುದೇ ಮಹತ್ವಪೂರ್ಣವಾದುದು. ವಿದ್ಯಾರ್ಥಿಗಳಲ್ಲಿರುವ ಗುಣಮಟ್ಟವು ಸಂಸ್ಥೆಯ ಸ್ಥಾನಮಾನವನ್ನು ನಿರ್ಧರಿಸುತ್ತದೆ ಎಂದು ಸಂತಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ ಹೇಳಿದರು.

ಕಾಲೇಜಿನ ಗಣಿತಶಾಸ್ತ್ರ ಸ್ನಾತಕೋತ್ತರ ವಿಭಾಗದ ಆಶ್ರಯದಲ್ಲಿ ಆಗಸ್ಟ್ 6 ರಂದು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಸಭಾಂಗಣದಲ್ಲಿ ಆಯೋಜಿಸಲಾದ ಫ್ರೆಶರ್ಸ್ ಡೇ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಮಾತನಾಡಿದರು. ಗಣಿತಶಾಸ್ತ್ರವು ಪರಿಪೂರ್ಣತೆಯನ್ನು ಹೊಂದಿರುವ ಒಂದು ಪ್ರಬುದ್ಧ ವಿಜ್ಞಾನ ವಿಷಯ. ಗಣಿತ, ಸಂಗೀತ, ತರ್ಕ ಮತ್ತು ವ್ಯಾಕರಣ ಅನ್ಯೋನ್ಯ ಸಂಬಂಧವನ್ನು ಹೊಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಗಣಿತದ ಪರಿಣಾಮಕಾರಿ ಅಧ್ಯಯನಕ್ಕೆ ಮಾನಸಿಕ ಸಿದ್ಧತೆ ಬಹಳ ಅಗತ್ಯ. ಅಧ್ಯಯನದಲ್ಲಿ ಸತತ ಪರಿಶ್ರಮವಿದ್ದಾಗ ಮಾತ್ರ ಉತ್ತಮ ಫಲಿತಾಂಶ ಸಾಧ್ಯ. ವಿಜ್ಞಾನದ ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ ಬಹಳಷ್ಟು ಅಗತ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋನೊರೊನ್ಹಾ ಮಾತನಾಡಿ, ವಿಜ್ಞಾನದ ವಿದ್ಯಾರ್ಥಿಗಳು ಹೆಚ್ಚಿನ ಬುದ್ದಿಶಕ್ತಿಗೆ ಹೆಸರಾದವರು. ವಿದ್ಯಾರ್ಥಿ ಬದುಕಿನಲ್ಲಿ ಮಾನಸಿಕ ದೃಢತೆ ಮಹಳ ಮುಖ್ಯ. ಗೊಂದಲದ ಸನ್ನಿವೇಶ ಎದುರಾದಲ್ಲಿ ಶಿಕ್ಷಕರ ಮಾರ್ಗದರ್ಶನ ಪಡೆದುಕೊಳ್ಳಬೇಕು. ಶಿಕ್ಷಣದಲ್ಲಿ ಮೌಲ್ಯಗಳ ಗಳಿಕೆಗೂ ಅವಕಾಶವಿರಬೇಕು ಎಂದರು.

ವಿಭಾಗದ ಸಹಾಯಕ ಪ್ರಾಧ್ಯಾಪಕಿ ವೈಷ್ಣವಿ ಸಿ ಮಾತನಾಡಿ, ಕಾಲೇಜಿನ ಗಣಿತಶಾಸ್ತ್ರ ಸ್ನಾತಕೋತ್ತರ ವಿಭಾಗವು ಕಳೆದ ಆರು ವರ್ಷಗಳಲ್ಲಿ ಉನ್ನತ ಮಟ್ಟದ ಶೈಕ್ಷಣಿಕ ಸಾಧನೆಯನ್ನು ಮಾಡಿದೆ. ಇಲ್ಲಿಯ ವಿದ್ಯಾರ್ಥಿಗಳು ವಿವಿ ಮಟ್ಟದಲ್ಲಿ ಶೈಕ್ಷಣಿಕ ಅಗ್ರ ಪಂಕ್ತಿಯನ್ನು ಹೊಂದಿರುವುದು ಅತ್ಯಂತ ಹೆಮ್ಮೆಯ ಸಂಗತಿ. ಸ್ನಾತಕೋತ್ತರ ಶಿಕ್ಷಣ ಪಡೆದ ಬಹು ಪಾಲು ವಿದ್ಯಾರ್ಥಿಗಳು ತಮ್ಮ ವೃತ್ತಿ ಬದುಕಿನಲ್ಲಿ ಯಶಸ್ಸನ್ನು ಕಂಡಿದ್ದಾರೆ ಎಂದು ಹೇಳಿ, ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಅನುಷಾ ಎಲ್, ಕಾರ್ತಿಕ್ ಕೆ, ಮೋಹನ್‍ರಾಜ್ ಎಸ್ ಮತ್ತು ವೃಕ್ಷವರ್ಧನ ಹೆಬ್ಬಾರ್ ಎನ್ ಉಪಸ್ಥಿತರಿದ್ದರು. ಅನನ್ಯ ಲಕ್ಷ್ಮೀ ಮತ್ತು ತಂಡದವರು ಪ್ರಾರ್ಥಿಸಿದರು. ಶ್ರುತಿ ಯು ಸ್ವಾಗತಿಸಿ, ಆಶ್ರಿತಾ ಬಿ ವಂದಿಸಿದರು. ಪಲ್ಲವಿ ಪಿ ಕಾರ್ಯಕ್ರಮ ನಿರೂಪಿಸಿದರು.