Tuesday, November 26, 2024
ಸುದ್ದಿ

ಭಾರಿ ಮಳೆಗೆ ಬಂಟ್ವಾಳ ಜಲಾವೃತ : ಜನಾರ್ದನ ಪೂಜಾರಿ ಮನೆ, ಬಂಟರ ಭವನಕ್ಕೆ ನುಗ್ಗಿದ ನೆರೆ ಬಂಟ್ವಾಳ – ಕಹಳೆ ನ್ಯೂಸ್

ಬಂಟ್ವಾಳ : ತಾಲೂಕಿನಾದ್ಯಂತ ಶನಿವಾರವೂ ಬೆಳಗ್ಗೆಯೂ ಭಾರೀ ಗಾಳಿ- ಮಳೆ ಮುಂದುವರಿದಿದೆ. ನೇತ್ರಾವತಿ ನೀರಿನ ಮಟ್ಟ ತೀವ್ರ ಹೆಚ್ಚಾಗಿದ್ದು, ಅಪಾಯಕಾರಿಯಾಗಿ ಹರಿಯುತ್ತಿದೆ.

ಕಳೆದ ರಾತ್ರಿಯಿಂದ ಸುರಿದ ಮಳೆಗೆ ಬಂಟ್ವಾಳದಲ್ಲಿ ಹಲವಾರು ಮನೆಗಳು ಜಲಾವೃತಗೊಂಡಿದೆ. ನಿನ್ನೆ 54 ಮನೆಗಳು ಜಲಾವೃತಗೊಂಡಿದ್ದರೆ, ಇಂದು ಬೆಳಗ್ಗೆ ಈ ಸಂಖ್ಯೆ 200 ದಾಟಿದೆ. 1000ಕ್ಕೂ ಅಧಿಕ ಮಂದಿ ಸಂತ್ರಸ್ತರಾಗಿದ್ದಾರೆ. ಈ ನಡುವೆ ತಾಲೂಕಿನಲ್ಲಿ ಐ.ಬಿ. ಮತ್ತು ಪಾಣೆಮಂಗಳೂರಿನ ಶಾರದಾ ಪ್ರೌಢಶಾಲೆಯಲ್ಲಿ ತೆರೆದಿರುವ ಗಂಜಿ ಕೇಂದ್ರದಲ್ಲಿ ಸಂತ್ರಸ್ತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಜನಾರ್ದನ ಪೂಜಾರಿ ಮನೆ ಜಲಾವೃತ
ನೇತ್ರಾವತಿ ಪ್ರವಾಹದಿಂದ ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿಯವರ ಮನೆಗೂ ನೆರೆ ನುಗ್ಗಿದೆ. ಇದರಿಂದ ಭಂಡಾರಿಬೆಟ್ಟುವಿನಲ್ಲಿರುವ ಪೂಜಾರಿಯ ಮನೆ ಜಲಾವೃತವಾಗಿದ್ದು, ಮನೆ ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.

ಬಂಟ್ವಾಳ ಬಂಟರ ಭವನಕ್ಕೂ ನೆರೆ ನೀರು ಪ್ರವೇಶಿಸಿದೆ. ಭವನದ ತಳ ಅಂತಸ್ತಿಗೆ ನೀರು ನುಗ್ಗಿದ್ದು, ಪಾಕಿರ್ಂಗ್ ಏರಿಯಾ ಸಂಪೂರ್ಣ ಜಲಾವೃತಗೊಂಡಿದೆ. ಇಲ್ಲಿನ ಡೈಮೆಂಡ್ ಸ್ಕೂಲ್, ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರಕ್ಕೂ ನೀರು ನುಗ್ಗಿದೆ. ತಲಪಾಡಿಯಲ್ಲಿ 17 ಮನೆಗಳು ಜಲಾವೃತಗೊಂಡಿದೆ. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ತಲಪಾಡಿಯಲ್ಲಿರುವ ಸರ್ವೀಸ್ ರಸ್ತೆ ಜಲಾವೃತಗೊಂಡಿದ್ದು, ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ನದಿಯ ಅಪಾಯದ ಮಟ್ಟ 8.5 ಆಗಿದ್ದು, ಶುಕ್ರವಾರ ತಡರಾತ್ರಿ ವೇಳೆಗೆ ನೇತ್ರಾವತಿ ನದಿ ನೀರಿನ ಮಟ್ಟ 11.7 ಮೀಟರ್ ಇತ್ತು. ಮುಂಜಾನೆ 11.6 ಮೀ.ನಲ್ಲಿ ಹರಿಯುತ್ತಿದೆ. ಬೆಳಗ್ಗೆಯಿಂದ ಭಾರೀ ಮಳೆಯಾಗುತ್ತಿದ್ದು, ಪ್ರವಾಹ ನೀರು ಮತ್ತೆ ಏರಿಕೆಯಾಗುವ ಸಾಧ್ಯತೆಯಿದ್ದು, ತೀರವಾಸಿಗಳು ತೀವ್ರ ಆತಂಕಿತರಾಗಿದ್ದಾರೆ.ಅಣೆಕಟ್ಟಿನಿಂದ ಗಂಟೆಗೊಮ್ಮೆ ಸೈರನ್ ಭಾರಿಸಿ ನೀರು ಬಿಡಲಾಗುತ್ತಿದೆ. ಶಂಭೂರು ಎಎಂಆರ್‍ನ 26 ಗೇಟುಗಳಲ್ಲಿ ನೇತ್ರಾವತಿ ನದಿ ನೀರು ಹೊರಬಿಡಲಾಗಿದ್ದು, ತುಂಬೆಯಲ್ಲಿ 8.5 ಮೀ.ಎತ್ತರದಲ್ಲಿ ನೀರು ಸಂಗ್ರಹಗೊಂಡು ಹರಿಯುತಿದೆ. ಕಳೆದ ವರ್ಷ ಈ ಸಮಯದಲ್ಲಿ ನೇತ್ರಾವತಿ ನೀರಿನ ಮಟ್ಟ 10.7 ಇತ್ತು. ಇದೇ ಮೊದಲ ಬಾರಿಗೆ ಈ ರೀತಿ ಅಪಾಯ ಮಟ್ಟದಲ್ಲಿ ನೇತ್ರಾವತಿ ಭೋರ್ಗರೆಯುತ್ತಿದೆ.