ಪ್ರವಾಹಕ್ಕೆ 12 ಮಂದಿ ಬಲಿ; ರಾಷ್ಟ್ರೀಯ ವಿಪತ್ತು ಸ್ಥಿತಿ ಎಂದು ಘೋಷಿಸಲು ಪ್ರಧಾನಿಗೆ ದೇವೇಗೌಡರ ಆಗ್ರಹ – ಕಹಳೆ ನ್ಯೂಸ್
ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಎದುರಾಗಿರುವ ಜಲಸಂಕಷ್ಟವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಪರಿಹಾರ ಹಾಗೂ ಪುನರ್ವಸತಿಗೆ ನೆರವು ನೀಡಬೇಕೆಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಆಗ್ರಹಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಇದು ಅತ್ಯಂತ ಭಯಾನಕ ಜಲಸಂಕಷ್ಟವಾಗಿದ್ದು, ಕರ್ನಾಟಕದ ಬಹುತೇಕ ಜಿಲ್ಲೆಗಳು ತೊಂದರೆಗೊಳಗಾಗಿವೆ. ಈ ಸ್ಥಿತಿಯಲ್ಲಿ ತೊಂದರೆಗೊಳಗಾಗಿರುವ ಜನ, ಜಾನುವಾರಗಳ ರಕ್ಷಣೆಗೆ ಸಮರೋಪಾದಿಯಲ್ಲಿ ಕೆಲಸ ನಡೆಯಬೇಕಾಗಿದೆ. ಅದಕ್ಕಾಗಿ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಹೇಳಿದ್ದಾರೆ.
ಕೃಷ್ಣಾ ನದಿಗೆ ಪ್ರವಾಹ ಆತಂಕ ಮೂಡಿಸಿದೆ. ಅತ್ಯಂತ ಸಣ್ಣ ನದಿ ಪಾತ್ರ ಹೊಂದಿರುವ ಮಲಪ್ರಭೆಯಲ್ಲಿ 1 ಲಕ್ಷ ಕ್ಯೂಸೆಕ್ ನೀರು ಬಂದಿದೆ. ಮಳೆ ಪ್ರವಾಹದಿಂದಾಗಿ ಇದುವರೆಗೂ ಸುಮಾರು 12 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ ಪರಿಹಾರವನ್ನು ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ, ಪ್ರವಾಹ ಪರಿಹಾರ ಕಾರ್ಯಗಳಿಗೆ ತಕ್ಷಣವೇ 100 ಕೋಟಿ ರೂ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.