ಮುಗೇರಡ್ಕ:ಮೊಗ್ರು ಗ್ರಾಮದ ಮುಗೇರಡ್ಕಕ್ಕೆ ಸಂಪರ್ಕ ಕಲ್ಪಿಸುವ ಬೆದ್ರೋಡಿ ತೂಗುಸೇತುವೆ. ಪ್ರವಾಹಕ್ಕೆ ಸಿಲುಕಿ ಈ ಸೇತುವೆ ಸಂಪೂರ್ಣ ಹಾನಿಗೀಡಾಗಿ, ನದಿಯಲ್ಲಿ ಕೊಚ್ಚಿ ಹೋಗಿದೆ.
ಕಳೆದ ಏಳೆಂಟು ವರ್ಷಗಳಿಂದ ಆಕರ್ಷಣೆಯಾಗಿದ್ದ ತೂಗು ಸೇತುವೆ ನೆರೆ ವಿಕೋಪಕ್ಕೆ ಬಲಿಯಾಗಿದೆ. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ನೂರಾರು ಕುಟುಂಬಗಳು, ಮಕ್ಕಳು, ಮಹಿಳೆಯರು ತಮ್ಮ ವಾಹನ ನಿಲ್ಲಿಸಿ ಈ ತೂಗು ಸೇತುವೆಯ ಮೇಲೆ ನಡೆದಾಡಿ, ಫೋಟೊ ತೆಗೆದು ಸಂಭ್ರಮ ಪಡುತ್ತಿದ್ದರು.
ನಾಲ್ಕು ವರ್ಷಗಳ ಹಿಂದೆ ನೆರೆ ನೀರಿನ ಜೊತೆ ತೇಲಿ ಬಂದ ದೊಡ್ಡ ಮರ ಸೇತುವೆಗೆ ಬಡಿದ ಹಿನ್ನೆಲೆಯಲ್ಲಿ ಅದನ್ನು ಇನ್ನೂ ಐದಡಿ ಎತ್ತರಕ್ಕೆ ಏರಿಸಲಾಗಿತ್ತು. ಆದರೆ ಈ ಬಾರಿಯ ನೆರೆ ನೀರಿನ ಪ್ರವಾಹ ಈ ಎತ್ತರವನ್ನೂ ಮೀರಿ ಹರಿದಿದೆ. ನೆರೆ ನೀರಲ್ಲಿ ಕೊಚ್ಚಿ ಬಂದ ಕಾಡಿನ ಮರಗಳು ತೂಗು ಸೇತುವೆ ತುಂಡು ಮಾಡಿ, ನೀರಿನೊಂದಿಗೆ ಸೇತುವೆಯನ್ನು ಹೊತ್ತೊಯ್ದಿದೆ. ನಿನ್ನೆ ತನಕ ಅಲ್ಲೊಂದು ತೂಗು ಸೇತುವೆ ಇತ್ತು ಅನ್ನೋದಕ್ಕೆ ಇಂದು ಬೆಳಗ್ಗೆ ಯಾವ ಕುರುಹೂ ಇರಲಿಲ್ಲ.
ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದ ನೂರಾರು ಕುಟುಂಬಗಳು ಈ ವಿಕೋಪದಿಂದ ತೊಂದರೆಗೆ ಒಳಗಾಗಿವೆ.
ಹೊಳೆಯ ಆಚೆ ಬದಿಯಿಂದ ಹಾಲಿನ ಡೈರಿಗೆ ಹಾಲು ಹಾಕುತ್ತಿದ್ದ ಸುಮಾರು 20 ಕ್ಕೂ ಹೈನುಗಾರರು, ಸೇತುವೆ ಮೂಲಕ ದಾಟಿ ರಾಷ್ಟ್ರೀಯ ಹೆದ್ದಾರಿಗೆ ಬಂದು ಶಾಲೆ, ಕಾಲೇಜುಗಳಿಗೆ, ಉದ್ಯೋಗಕ್ಕಾಗಿ ಉಪ್ಪಿನಂಗಡಿ, ಪುತ್ತೂರು, ಮಂಗಳೂರಿಗೆ ಪ್ರಯಾಣ ಮಾಡುತ್ತಿದ್ದ ನೂರಾರು ಜನರ ಸಂಪರ್ಕ ವ್ಯವಸ್ಥೆ ಕಡಿದು ಹೋಗಿದೆ.