Recent Posts

Monday, November 25, 2024
ಸುದ್ದಿ

ತಗ್ಗಿದ ಮಳೆ, ಹೆಚ್ಚಿದ ಸಾಂಕ್ರಾಮಿಕ ರೋಗ ಭೀತಿ, ಸಂತ್ರಸ್ತರಿಗೆ ಪರಿಹಾರ ಸಾಮಗ್ರಿ ತಲುಪಿಸಲು ಹರಸಾಹಸ – ಕಹಳೆ ನ್ಯೂಸ್

ಬೆಂಗಳೂರು – ಉತ್ತರ ಕರ್ನಾಟಕ ಭಾಗದಲ್ಲಿ ವರುಣನ ರೌದ್ರವಾತಾರ ಕೊಂಚ ತಗ್ಗಿದೆಯಾದರೂ ತುಂಬಿರುವ ಜಲಾಶಯಗಳಿಂದ ಭಾರೀ ಪ್ರಮಾಣ ದಲ್ಲಿ ನೀರನ್ನು ಹೊರಬಿಡುತ್ತಿರುವುದರಿಂದ ಈಗಾ ಗಲೇ ಪ್ರವಾಹದಲ್ಲಿ ಸಿಲುಕಿರುವ ಜನರ ಆತಂಕ ಕಡಿಮೆಯಾಗಿಲ್ಲ.

ಪರಿಹಾರ ಕೇಂದ್ರಗಳಲ್ಲಿರುವ ಸಂತ್ರಸ್ತರಿಗೆ ನೀರು, ಆಹಾರ, ಔಷಧಿಗಳ ಕೊರತೆ ಎದುರಾಗಿದೆ. ನೂರಾರು ಗ್ರಾಮಗಳು ಜಲಾವೃತಗೊಂಡಿದ್ದು, ಸಾಕಷ್ಟು ಜಾನುವಾರುಗಳು ಸಾವನ್ನಪ್ಪಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಸ್ತೆ, ಹೊಲ-ಗದ್ದೆ, ಮಠ- ಮಂದಿರ ಎಲ್ಲೆಡೆ ನೀರು ನುಗ್ಗಿದ್ದು ನೀರಿನ ಪ್ರಮಾಣ ಕಡಿಮೆಯಾಗಲು ಇನ್ನು ಹಲವು ದಿನಗಳು ಬೇಕಾಗುತ್ತದೆ. ಈಗಾಗಲೇ ನೀರಿನಲ್ಲಿ ಮುಳುಗಿರುವ ವಸ್ತುಗಳು ಕೊಳೆತುಹೋಗುತ್ತಿರುವ ಹಿನ್ನೆಲೆಯಲ್ಲಿ ರೋಗರುಜಿನಗಳು ಹರಡುವ ಸಾಧ್ಯತೆ ಇದ್ದು, ಆರೋಗ್ಯ ಇಲಾಖೆ ಸನ್ನದ್ಧವಾಗಬೇಕಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಳಗಾವಿ, ಬಾಗಲಕೋಟೆ, ಬಿಜಾಪುರ, ರಾಯಚೂರು, ಧಾರವಾಡ, ಯಾದಗಿರಿ, ಗದಗ ಮುಂತಾದೆಡೆ ಭಾರೀ ಮಳೆ ಮತ್ತು ಪ್ರವಾಹದಿಂದ ಸೇತುವೆಗಳು, ರಸ್ತೆಗಳು ಕೊಚ್ಚಿಹೋಗಿ ಸಂಪರ್ಕ ಕಡಿತಗೊಂಡಿವೆ. ದುರಸ್ತಿಯಾಗಲು ಇನ್ನು ಹಲವು ದಿನಗಳೇ ಬೇಕಾಗುತ್ತದೆ.

ಭಾರೀ ಮಳೆ ಮತ್ತು ಪ್ರವಾಹದಿಂದ ಸುಮಾರು 800 ಗ್ರಾಮಗಳು ಜಲಾವೃತಗೊಂಡಿದ್ದು, ಎರಡೂವರೆ ಲಕ್ಷಕ್ಕೂ ಅಧಿಕ ಜನರು ಸಂತ್ರಸ್ತರಾಗಿ ಪರಿಹಾರ ಕೇಂದ್ರಗಳನ್ನು ಸೇರಿದ್ದಾರೆ. ಅವರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಹರಸಾಹಸವಾಗಿದೆ.

ಸಂತ್ರಸ್ತರ ಕೇಂದ್ರಗಳಲ್ಲಿ ಇರುವವರಿಗೆ ಅನ್ನ, ಆಹಾರ, ಔಷಧದ ಕೊರತೆ ಎದುರಾಗುತ್ತಿದೆ. ಸ್ಥಳೀಯ ಜಿಲ್ಲಾಡಳಿತ ಸಮರೋಪಾದಿಯಲ್ಲಿ ಪರಿಹಾರ ಕ್ರಮಗಳನ್ನು ಕೈಗೊಂಡರೂ ಕೂಡ ಸಮರ್ಪಕ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಮಳೆ ನಿಂತಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ಸಂತ್ರಸ್ತರೆಲ್ಲ ತಮ್ಮ ತಮ್ಮ ಊರುಗಳಿಗೆ ತೆರಳಲು ಮುಂದಾಗುತ್ತಿದ್ದಾರೆ. ಆದರೆ ಪ್ರವಾಹದ ಭೀತಿ ಇನ್ನೂ ಕಡಿಮೆಯಾಗಿಲ್ಲ. ಹಾಗಾಗಿ ಸಂತ್ರಸ್ತರು ಮರಳಲು ಸಾಧ್ಯವಾಗುತ್ತಿಲ್ಲ.

ನಿರಾಶ್ರಿತ ಕೇಂದ್ರದಲ್ಲಿ ಇರುವವರಿಗೆ ಪರಿಹಾರ ಸಾಮಾಗ್ರಿಗಳನ್ನು ಒದಗಿಸಲು ಹಲವೆಡೆ ಸಂಚಾರದ ವ್ಯವಸ್ಥೆಗೆ ಅಡಚಣೆಯಾಗಿದೆ. ಪ್ರವಾಹದಲ್ಲಿ ಸಿಲುಕಿ ನರಳುತ್ತಿರುವ ಜನರ ಸಹಾಯಕ್ಕೆ ರಾಜ್ಯದ ವಿವಿಧೆಡೆಯಿಂದ ಜನರು ಅಪಾರ ಪ್ರಮಾಣ ನೆರವು ನೀಡುತ್ತಿದ್ದಾರೆ. ಅವುಗಳನ್ನು ಸಂತ್ರಸ್ತರಿರುವ ಸ್ಥಳಕ್ಕೆ ತಲುಪಿಸುವುದು ದುಸ್ಸಾಹಸವಾಗುತ್ತಿದೆ.

ಇತ್ತ ಸಂತ್ರಸ್ತ ಕೇಂದ್ರಗಳಲ್ಲಿ ಸೂಕ್ತ ವ್ಯವಸ್ಥೆಗಳು ಸಿಗುತ್ತಿಲ್ಲ. ಗರ್ಭಿಣಿಯರು, ವೃದ್ಧರು, ಮಹಿಳೆಯರಿಗೆ ತೀವ್ರ ತೊಂದರೆಯಾಗುತ್ತಿದೆ. ಸರ್ಕಾರಿ ಶಾಲಾಕಾಲೇಜು, ಸಮುದಾಯನ ಭವನ, ಅಂಗನವಾಡಿ ಕೇಂದ್ರಗಳಲ್ಲಿ ತೆರೆದಿರುವ ಪರಿಹಾರ ಕೇಂದ್ರಗಳಲ್ಲಿ ವಿದ್ಯುತ್, ಶೌಚಾಲಯಗಳಿಲ್ಲದೆ ಜನ ನರಳಾಡುತ್ತಿದ್ದಾರೆ.

ಕೆಲವೆಡೆ ಸಂತ್ರಸ್ತರ ಕೇಂದ್ರಗಳಿಗೂ ನೀರು ನುಗ್ಗಿ ಬೇರೆಡೆಗೂ ಸ್ಥಳಾಂತರಿಸಲಾಗಿದೆ. ಪರಿಸ್ಥಿತಿ ಯಥಾಸ್ಥಿತಿಗೆ ಬರಲು ಇನ್ನು ಹಲವು ದಿನಗಳು ಬೇಕಾಗಿದೆ. ತಮ್ಮ ಮನೆಮಠ ಕಳೆದುಕೊಂಡವ ಗೋಳು ಹೇಳತೀರದಾಗಿದೆ.

ಜಲಾಶಯಗಳಿಂದ ನೀರಿನ ಹೊರಹರಿವು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಕೂಡ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ತುಂಗಭದ್ರಾ ಜಲಾಶಯದಿಂದ ನೀರು ಬಿಟ್ಟ ಪರಿಣಾಮ ಬಳ್ಳಾರಿಜಿಲ್ಲೆಯ ಹೊಸಪೇಟೆ ಹಂಪಿಯ ಪುರಂದರದಾಸ ಮಂಟಪ ಸಂಪೂರ್ಣ ಮುಳುಗಡೆಯಾಗಿದೆ. ರಾಮಲಕ್ಷ್ಮಣ ತೀರ್ಥ ದೇವಸ್ಥಾನಕ್ಕೆ ನೀರು ನುಗ್ಗಿದೆ.

ಯಾದಗಿರಿ ಜಿಲ್ಲೆ ಗದಲಮರಿ ಸಮೀಪ ಪ್ರವಾಹಕ್ಕೆ ಸಿಲುಕಿ ಪರದಾಡುತ್ತಿದ್ದ ತಂದೆ ಹಾಗೂ ನಾಲ್ವರು ಮಕ್ಕಳನ್ನು ಎನ್‍ಡಿಆರ್‍ಎಫ್ ಪಡೆ ಇಂದು ರಕ್ಷಿಸಿದೆ. ಇತ್ತ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಭಾರೀ ಮಳೆಗೆ ಜನಜೀವನ ಅಸ್ತವ್ಯವಸ್ತವಾಗಿದ್ದು, ಜನ, ಜಾನುವಾರು ರಕ್ಷಣೆಗೆ ಸೇನಾ ಕಾರ್ಯಪಡೆ ಮುಂದಾಗಿದೆ.

ಕಂಪ್ಲಿಯ ಹೊಳೆ ಆಂಜನೇಯ ದೇವಸ್ಥಾನಕೂಡ ಮುಳುಗಡೆಯಾಗಿದೆ. ತುಂಗಾಭದ್ರ ಅಣೆಕಟ್ಟಿನ ಸುತ್ತಮುತ್ತಲ ಗ್ರಾಮದ ಜನರನ್ನು ಬೇರೆಡೆ ಸ್ಥಳಾಂತರಿಸಲಾಗುತ್ತಿದೆ. ಗಂಗಾವತಿ ತಾಲ್ಲೂಕು ವೀರಾಪುರಗುಡ್ಡ ಪ್ರವಾಸಕ್ಕೆ ತೆರಳಿದ್ದ ವಿದೇಶಿ ಪ್ರವಾಸಿಗರು ಪ್ರವಾಹದಲ್ಲಿ ಸಿಲುಕಿದ್ದು, ಅವರನ್ನು ರಕ್ಷಣೆ ಮಾಡಲಾಗಿದೆ.

ಮಲೆನಾಡಿನಲ್ಲಿ ಪ್ರವಾಹ ಪರಿಸ್ಥಿತಿ ಇಲ್ಲದಿದ್ದರೂ ಗುಡ್ಡ ಕುಸಿತ, ರಸ್ತೆ ಸಂಪರ್ಕ ಕಡಿತ ಹೆಚ್ಚಾಗುತ್ತಿದೆ. ಚಾರ್ಮಡಿ, ಶಿರಾಡಿಘಾಟ್ ಪ್ರದೇಶದಲ್ಲಿ ಗುಡ್ಡ ಕುಸಿದು, ಚಾರ್ಮಡಿಘಾಟ್ ರಸ್ತೆ ಬಂದ್ ಮಾಡಲಾಗಿದೆ. ಶಿವಮೊಗ್ಗ, ಮಣಿಪಾಲ, ಸೊರಬ, ಶಿಕಾರಿಪುರ ರಸ್ತೆಗಳು ಬಂದ್ ಆಗಿವೆ. ಶರಾವತಿ ನದಿ ಉಕ್ಕಿ ಹರಿಯುತ್ತಿರುವುದರಿಂದ ಸಾಗರ ತಾಲ್ಲೂಕಿನ ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಆಗಮಿಸದಂತೆ ಭಕ್ತರಿಗೆ ಆಡಳಿತ ಮಂಡಳಿ ಮನವಿ ಮಾಡಿದೆ.

ಮೂರು ಜಿಲ್ಲೆಗಳಲ್ಲಿ 14 ಕಡೆ ಗುಡ್ಡ ಕುಸಿದಿದೆ. ಚಿಕ್ಕಮಗಳೂರಿನಲ್ಲಿ ಹಲವು ಕಡೆ ಗುಡ್ಡ ಕುಸಿದು ಭಾರೀ ಪ್ರಮಾಣದ ಕಾಫಿ ಬೆಳೆ ನಾಶವಾಗಿದೆ. ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಳಿಗೆಗ್ರಾಮದಲ್ಲಿ ಗುಡ್ಡಕುಸಿದ ಪರಿಣಾಮ ಕಾಫಿ, ಅಡಿಕೆ ತೋಟ ನಾಶವಾಗಿವೆ. ಅದೇ ರೀತಿ ಮುಳ್ಳಯ್ಯನಗಿರಿಯಲ್ಲೂ ಗುಡ್ಡ ಕುಸಿದು, ಬಾಬಬುಡನಗಿರಿ, ಚಿಕ್ಕಮಗಳೂರು ಸಂಪರ್ಕ ಕಡಿತಗೊಂಡಿದೆ.