ಬೆಳ್ತಂಗಡಿ: ಕಳೆದ ಒಂದು ವಾರದಿಂದ ಸುರಿದ ಧಾರಕಾರ ಮಳೆಗೆ ಕರಾವಳಿ, ಮಲೆನಾಡು ನಲುಗಿ ಹೋಗಿದೆ. ಭಾರಿ ಮಳೆಯಿಂದಾಗಿ ಚಾರ್ಮಾಡಿ ಘಾಟಿಯಲ್ಲಿ ಅಲ್ಲಲ್ಲಿ ಭೂಕುಸಿತವಾಗಿದ್ದು, ರಸ್ತೆ ಸಂಪರ್ಕ ಕಡಿತವಾಗಿದೆ.
ತಿರುವುಗಳಲ್ಲಿ ಭೂಭಾಗ ಬಾಯ್ತೆರೆದಿದ್ದು ಅಪಾಯಕಾರಿಯಾಗಿ ಪರಿಣಮಿಸಿದೆ. ಬನ್ಕಲ್ ವ್ಯಾಪ್ತಿಯಲ್ಲಿ ರಸ್ತೆ ಅಂಚು ವಿಪರೀತ ಕುಸಿತಗೊಂಡಿರುವ ಕಾರಣ ತೆರವು ಕಾರ್ಯಾಚರಣೆಗೂ ಅಡ್ಡಿಯಾಗುತ್ತಿದೆ.
ಭೂ ಕುಸಿತ ಹೆಚ್ಚಳವಾದ ಕಾರಣ ಸಂಪೂರ್ಣ ರಸ್ತೆಯೇ ನಾಶವಾಗುವ ಹಂತದಲ್ಲಿದೆ. ಇದರಿಂದಾಗಿ ಬೆಳ್ತಂಗಡಿ ಚಿಕ್ಕಮಗಳೂರು ಸಂಪರ್ಕ ಕಡಿತವಾಗಿದ್ದು, ಮುಂದಿನ ನಾಲ್ಕು ತಿಂಗಳು ಚಾರ್ಮಾಡಿ ಘಾಟಿಯ ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಾಗಿದೆ.