ವಾರಾಣಸಿ: ಒಂದೇ ಬಾರಿಗೆ ಮೂರು ಬಾರಿ ತಲಾಖ್ ಹೇಳುವಂಥ ತ್ರಿವಳಿ ತಲಾಖ್ ಪದ್ಧತಿಯನ್ನು ನಿಷೇಧಿಸಿ ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ರಕ್ಷಿಸಲು ನಿರ್ಧರಿಸಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ವಾರಾಣಸಿಯ ಮುಸ್ಲಿಂ ಮಹಿಳೆಯರು ಸೋದರನಂತೆ ಕಾಣುತ್ತಿದ್ದಾರೆ. ಸ್ವತಃ ಕೈಯಿಂದಲೇ ತಯಾರಿಸಿದ ರಾಖೀಗಳನ್ನು ಮಹಿಳೆಯರು ಈ ಬಾರಿಯ ರಕ್ಷಾ ಬಂಧನ ದಿನಕ್ಕಾಗಿ ಪ್ರಧಾನಿಗೆ ಕಳುಹಿಸುತ್ತಿದ್ದಾರೆ.
ಇದು ಕೇವಲ ಪ್ರಚಾರಕ್ಕಾಗಿ ಮಾಡಿದ್ದು. ಆರೆಸ್ಸೆಸ್ ಈ ಕೆಲಸವನ್ನು ಮಾಡಿಸುತ್ತಿದೆ ಎಂದು ಭಾರತೀಯ ಮುಸ್ಲಿಂ ಲೀಗ್ ಒಕ್ಕೂಟದ ಅಧ್ಯಕ್ಷ ಮತಿನ್ ಖಾನ್ ಆರೋಪಿಸಿದ್ದಾರೆ. ರಾಖೀ ತಯಾರಿಸುವುದಕ್ಕಾಗಿ ಮುಸ್ಲಿಂ ಮಹಿಳೆಯರಿಗೆ ಹಣ ನೀಡಿದ್ದಾರೆ. ಅಧಿಕಾರದ ಬಲದಿಂದ ಈ ಕೆಲಸವನ್ನು ಅವರಿಂದ ಮಾಡಿಸಲಾಗುತ್ತಿದೆ ಎಂದೂ ಅವರು ಟೀಕಿಸಿದ್ದಾರೆ.
ಆದರೆ 2013ರಿಂದಲೂ ವಾರಾಣಸಿಯ ಮುಸ್ಲಿಂ ವಿಮೆನ್ ಫೌಂಡೇಶನ್ ಮೋದಿಗೆ ರಾಖಿಗಳನ್ನು ಕಳುಹಿಸುತ್ತಿದೆ. ನಮ್ಮ ಸಮಾಜದಲ್ಲಿ ಹಾಗೂ ಕುಟುಂಬದಲ್ಲಿ ನಮ್ಮ ಮೇಲೆ ಉಂಟಾಗುತ್ತಿರುವ ದೌರ್ಜನ್ಯದಿಂದ ರಕ್ಷಿಸುವಂತೆ ಕೋರಿ ನಾವು ರಾಖಿಯನ್ನು ಕಳುಹಿಸುತ್ತಿದ್ದೇವೆ ಎಂದು ಕಳೆದ ವರ್ಷ ಎಂಡಬ್ಲ್ಯುಎಫ್‍ನ ಸದಸ್ಯೆ ನಜೀಮಾ ಅನ್ಸಾರಿ ಹೇಳಿದ್ದರು. ಆದರೆ ಈ ಬಾರಿ ಮೋದಿಗೆ ರಾಖೀ ಕಳುಹಿಸಲು ಮುಸ್ಲಿಂ ಮಹಿಳೆಯರಿಗೆ ತ್ರಿವಳಿ ತಲಾಖ್ ನಿಷೇಧದ ಕಾರಣವೂ ಸಿಕ್ಕಂತಾಗಿದೆ.