ಮಂಗಳೂರು: ನಗರದಲ್ಲಿ ದಿನದಿಂದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಪ್ರಸ್ತುತ ಪ್ರಮುಖ ಪ್ರದೇಶಗಳಲ್ಲಿ ವೃತ್ತಗಳು ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿರುವುದರಿಂದ ಅವುಗಳನ್ನು ತೆರವುಗೊಳಿಸಬೇಕು ಎಂದು ಮಹಾನಗರ ಪಾಲಿಕೆಗೆ ಈಗಾಗಲೇ ಒತ್ತಡ ಬಂದಿದೆ. ಹಾಗಾಗಿ ಇದೀಗ ಲೇಡಿಹಿಲ್ ಸಮೀಪದ ವೃತ್ತವನ್ನು ಈಗಿರುವ ಜಾಗದಿಂದ 2-3 ಅಡಿ ಮುಂದಕ್ಕೆ ಸ್ಥಳಾಂತರಿಸಲು ತೀರ್ಮಾನಿಸಲಾಗಿದೆ.
ಲೇಡಿಹಿಲ್ ಶಾಲೆಯ ಪಕ್ಕದಲ್ಲಿರುವ ವೃತ್ತದಿಂದ ಮಣ್ಣಗುಡ್ಡೆ, ಉರ್ವ ಮಾರುಕಟ್ಟೆ, ಚಿಲಿಂಬಿ, ಲಾಲ್ಬಾಗ್‍ಗೆ ರಸ್ತೆ ಸಂಪರ್ಕ ಕಲ್ಪಿಸುತ್ತದೆ.
ಇದೇ ಕಾರಣಕ್ಕೆ ಈ ವೃತ್ತದಿಂದಾಗಿ ದಿನಂಪ್ರತಿ ಸಾವಿರಾರು ವಾಹನಗಳು ಅತ್ತಿಂದಿತ್ತ ಸಂಚರಿಸುತ್ತದೆ. ಹೀಗಿರುವಾಗ ಇಲ್ಲಿರುವ ವೃತ್ತದಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತದೆ ಎಂದು ಈಗಾಗಲೇ ಸಾರ್ವಜನಿಕರಿಂದ ಆಕ್ಷೇಪ ಕೇಳಿಬಂದಿತ್ತು. ಕೊನೆಗೂ ಪಾಲಿಕೆ ಈ ವೃತ್ತವನ್ನು ಮರುನಿರ್ಮಾಣ ಮಾಡಲು ತೀರ್ಮಾನಿಸಿದೆ.
ಲೇಡಿಹಿಲ್ ಪ್ರದೇಶದಲ್ಲಿ ಕೆಲವು ವರ್ಷಗಳ ಹಿಂದೆ ಏಕಮುಖ ಸಂಚಾರ ಮಾರ್ಗವಿದ್ದಾಗ ಈ ವೃತ್ತ ನಿರ್ಮಾಣ ಮಾಡಲಾಗಿತ್ತು. ಆದರೆ ಇದೀಗ ಫುಟ್‍ಪಾತ್ ಕಾಮಗಾರಿ ಸೇರಿದಂತೆ ರಸ್ತೆಯು ದ್ವಿಪಥವಾಗಿದೆ. ಆದರೂ ವೃತ್ತವನ್ನು ಮಾತ್ರ ಸ್ಥಳಾಂತರಿಸಲಿಲ್ಲ. ಸಾರ್ವಜನಿಕರ ಆಕ್ಷೇಪದಿಂದಾಗಿ ಇದೀಗ ಪಾಲಿಕೆಯು ಫುಟ್‍ಪಾತ್ ಅಳತೆ ತೆಗೆದು, ಈಗಿದ್ದ ವೃತ್ತದ ಸುಮಾರು 2-3 ಅಡಿ ಮುಂದೆ ಅಂದರೆ, ರಸ್ತೆಯ ಮಧ್ಯಭಾಗದಲ್ಲಿ ವೃತ್ತ ನಿರ್ಮಾಣ ಮಾಡಲು ಹೊರಟಿದೆ.
ಇನ್ನು ಕೆಲವು ದಿನಗಳಲ್ಲಿ ಹೊಸ ವೃತ್ತದ ಮಾರ್ಕಿಂಗ್ ಮಾಡಲಿದ್ದು, ಬಳಿಕ ಪ್ರಾಯೋಗಿಕವಾಗಿ ವಾಹನ ಸಂಚಾರ ವ್ಯವಸ್ಥೆಯನ್ನು ನೋಡಲಾಗುತ್ತದೆ. ಬಳಿಕವಷ್ಟೇ ನೂತನ ವೃತ್ತ ನಿರ್ಮಾಣ ಕೆಲಸ ಪ್ರಾರಂಭವಾಗಲಿದೆ. ಈ ವೃತ್ತ ಯಾವ ರೀತಿ ನಿರ್ಮಾಣವಾಗಲಿದೆ ಎಂಬುದರ ಬಗ್ಗೆ ಸದ್ಯದಲ್ಲಿಯೇ ಪಾಲಿಕೆ ಮಟ್ಟದಲ್ಲಿ ತೀರ್ಮಾನವಾಗಲಿದೆ.
ವಾಹನ ಸಂಚಾರಕ್ಕೆ ತೊಂದರೆಯಾಗುತ್ತದೆ ಎಂಬ ನಿಟ್ಟಿನಲ್ಲಿ ನಗರದಲ್ಲಿ ವೃತ್ತಗಳನ್ನು ತೆರವುಗೊಳಿಸಿ ಮತ್ತು ವೃತ್ತಗಳನ್ನು ಕಿರಿದು ಮಾಡಿದ್ದು ಇದೇ ಮೊದಲಲ್ಲ. ನಂತೂರು ವೃತ್ತದ ಸಂಚಾರ ದಟ್ಟಣೆ ಕಡಿಮೆಗೊಳಿಸುವ ಕಾರಣದಿಂದ ವೃತ್ತದ ಗಾತ್ರವನ್ನು ಈ ಹಿಂದಿಗಿಂತ ಶೇ.50ರಷ್ಟು ಕಡಿಮೆ ಮಾಡಲಾಗಿದೆ.
ಸುಮಾರು 11 ಮೀಟರ್ ನಷ್ಟು ಸುತ್ತಳತೆಯಿದ್ದ ನಂತೂರು ವೃತ್ತವನ್ನು 5.5 ಮೀಟರ್ ಗೆ ಕಿರಿದು ಮಾಡಲಾಗಿದೆ. ಈ ಹಿಂದೆ ಇದ್ದಂತಹ ಬಂಟ್ಸ್ ಹಾಸ್ಟೆಲ್, ಸೈಂಟ್ ಆ್ಯಗ್ನೆಸ್ ಕಾಲೇಜು ವೃತ್ತ, ಬೆಂದೂರು, ಕಂಕನಾಡಿ, ಕದ್ರಿ ಶಿವಬಾಗ್ ವೃತ್ತಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ. ಇದರಿಂದಾಗಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗಿದೆ.
ಕೆಲವು ದಿನಗಳಲ್ಲೇ ಮಾರ್ಕಿಂಗ್ ಕೆಲಸ ವಾಹನ ಸಂಚಾರಕ್ಕೆ ಅನುಕೂಲ ಮಾಡುವ ದೃಷ್ಟಿಯಿಂದಾಗಿ ಲೇಡಿಹಿಲ್ ವೃತ್ತವನ್ನು ಸದ್ಯ ಕೆಡವಲಾಗಿದೆ. ಅಲ್ಲೇ ಸುಮಾರು ಮೂರು ಅಡಿ ಮುಂದೆ ರಸ್ತೆ ಮಧ್ಯ ಭಾಗದಲ್ಲಿ ನೂತನ ವೃತ್ತ ನಿರ್ಮಾಣವಾಗಲಿದೆ. ಇನ್ನು ಕೆಲವು ದಿನಗಳಲ್ಲಿ ನೂತನ ವೃತ್ತದ ಮಾರ್ಕಿಂಗ್ ಕಾರ್ಯ ನಡೆಯಲಿದೆ.