ಕಕ್ಕಾವು ಸಂತ್ರಸ್ತರ ಕೇಂದ್ರಕ್ಕೆ ಸಿಎಂ ಭೇಟಿ: ಪ್ರತಿ ಕುಟುಂಬಕ್ಕೆ 10 ಸಾವಿರ ತಾತ್ಕಾಲಿಕ ಪರಿಹಾರ ಘೋಷಣೆ- ಕಹಳೆ ನ್ಯೂಸ್
ಬೆಳ್ತಂಗಡಿ: ನೆರೆಯಿಂದಾಗಿ ಹಾನಿಗೀಡಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗ್ರಾಮಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಭೇಟಿ ನೀಡಿ, ಸಂತ್ರಸ್ತರಿಗೆ ಸಾಂತ್ವಾನ ಹೇಳಿದ್ದಾರೆ. ಅಲ್ಲದೇ ಕಕ್ಕಾವು ಸಂತ್ರಸ್ತರಿಗೆ 10 ಸಾವಿರ ತಾತ್ಕಾಲಿಕ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಗ್ರಾಮಸ್ತರಿಗೆ ಸಾಂತ್ವಾನ ಹೇಳಿದ ಮುಖ್ಯಮಂತ್ರಿಗಳು, ಸ್ಥಳದಲ್ಲಿಯೇ ಕೇಂದ್ರದಲ್ಲಿದ್ದ 321 ಕುಟುಂಬಗಳಿಗೆ ತಲಾ 10ಸಾವಿರ ರೂಪಾಯಿ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದರು.
ಈ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಕಕ್ಕಾವು ಗ್ರಾಮದ ಸಂತ್ರಸ್ಥರನ್ನು ಭೇಟಿ ಮಾಡಿದ್ದೇನೆ. ಎಲ್ಲಾ 321 ಕುಟುಂಬಕ್ಕೆ ತಲಾ 10 ಸಾವಿರ ರೂ ನೀಡಲಾಗುತ್ತದೆ. 50-60 ಮನೆಗಳ ರಿಪೇರಿಗೆ ತಲಾ 1 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದರು.
ಇನ್ನೂ ಸಂತ್ರಸ್ತ ಕುಟುಂಬದಲ್ಲಿನ ಮನೆ ಕಳೆದುಕೊಂಡವರಿಗಾಗಿ 275 ಮನೆಗಳ ಪುನರ್ ನಿರ್ಮಾಣಕ್ಕಾಗಿ 5 ಲಕ್ಷ ರೂಪಾಯಿ ನೀಡಲಾಗುತ್ತದೆ. ತಕ್ಷಣ ಸ್ಥಳ ಹುಡುಕಿ, ಮನೆ ಕಟ್ಟಲು ಶಾಸಕರಿಗೆ ಜಾಗನೋಡುವಂತೆ ಸೂಚಿಸಿದ್ದೇನೆ. 10-15 ದಿನಗಳಲ್ಲಿ ಸ್ಥಳ ಹುಡುಕಲು ಅಧಿಕಾರಿಗಳಿಗೂ ಆದೇಶಿಸಲಾಗಿದೆ ಎಂದು ಹೇಳಿದರು.
ಇದಲ್ಲದೇ, ಮನೆಕಟ್ಟಲು ಆಗದವರಿಗೆ ಪ್ರತಿತಿಂಗಳು 5 ಸಾವಿರೂ ನೆರವು ನೀಡಲಾಗುತ್ತದೆ. ಈ ಮೂಲಕ ಸಂತ್ರಸ್ತರ ನೆರವಿಗೆ ಸರ್ಕಾರ ನಿಂತಿದೆ. ಸೂಕ್ತ ರೀತಿಯಲ್ಲಿ ಸಂತ್ರಸ್ತರಿಗೆ ನೆರವು ಕಲ್ಪಿಸುವ ಕಾರ್ಯವನ್ನು ಸರ್ಕಾರ ಮಾಡಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಇತರೆ ಭಾಗಗಳಿಗೂ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದರು.