ಪ್ರಖ್ಯಾತ ಸಿನಿ ನಟರು, ಕ್ರೀಡಾಲೋಕ ಮಂದಿ ರಾಜಕೀಯಕ್ಕೆ ಪದಾರ್ಪಣೆ ಮಾಡೋದು ಮಾಮೂಲು. ಸನ್ನಿ ಡಿಯೋಲ್, ಗೌತಮ್ ಗಂಭೀರ್ ಹೀಗೆ ನಾನ ಮಂದಿ ಬಿಜೆಪಿ ಪಾಳಯಕ್ಕೆ ಎಂಟ್ರಿ ಕೊಟ್ಟಿರೋದು ಗೊತ್ತೇ ಇದೆ. ಇದೀಗ ಅಂತರರಾಷ್ಟ್ರೀಯ ಕುಸ್ತಿಪಟು ಬಬಿತಾ ಪೋಗಟ್ ಮತ್ತು ಅವರ ತಂದೆ ಮಹಾವೀರ್ ಪೋಗಟ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಪುತ್ರಿಯರಿಗೆ ಕುಸ್ತಿ ತರಬೇತಿ ನೀಡುವ ಮಹಾವೀರ್ ಪೋಗಟ್ ಅವರ ಸಾಧನೆಯನ್ನು ಆಧರಿಸಿ ಹಿಂದಿಯ ಯಶಸ್ವಿ ಚಲನಚಿತ್ರ ‘ದಂಗಲ್’ ನಿರ್ಮಾಣವಾಗಿತ್ತು.
ಹರಿಯಾಣದಲ್ಲಿ ಬಿಜೆಪಿ ಉಸ್ತುವಾರಿಯೂ ಆಗಿರುವ, ಕೇಂದ್ರ ಕ್ರೀಡಾ ಮತ್ತು ಯುವಜನ ಸೇವೆ ಸಚಿವ ಕಿರಣ್ ರಿಜಿಜು ಮತ್ತು ಬಿಜೆಪಿ ಹರಿಯಾಣ ಘಟಕದ ಅಧ್ಯಕ್ಷ ಸುಭಾಷ್ ಬರಲಾ ಉಪಸ್ಥಿತಿಯಲ್ಲಿ ಇಬ್ಬರೂ ಬಿಜೆಪಿಗೆ ಸೇರಿದ್ದಾರೆ. ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದುಪಡಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ನಡೆಯನ್ನು ಶ್ಲಾಘಿಸಿದ್ದಾರೆ.
ಇವರ ಸೇರ್ಪಡೆಯು, ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿರುವ ಹರಿಯಾಣದಲ್ಲಿ ಪಕ್ಷಕ್ಕೆ ನೆರವಾಗಲಿದೆ ಎಂದು ಬಿಜೆಪಿ ಆಶಿಸಿದೆ. ಅರ್ಜುನ ಪ್ರಶಸ್ತಿ ಪುರಸ್ಕೃತೆಯೂ ಆಗಿರುವ ಬಬಿತಾ, ‘ನಾನು ಮೋದಿ ಅವರ ದೊಡ್ಡ ಅಭಿಮಾನಿ. 370ನೇ ವಿಧಿ ರದ್ದತಿ ಮೂಲಕ ಅವರು ಇತಿಹಾಸ ನಿರ್ಮಿಸಿದ್ದಾರೆ’ ಎಂದರು.