Monday, January 20, 2025
ಸುದ್ದಿ

ತೆಂಕಿಲ ಗುಡ್ಡದಲ್ಲಿ ಬಿರುಕು: ಆತಂಕದಲ್ಲಿ ಜನತೆ – ಕಹಳೆ ನ್ಯೂಸ್

ಪುತ್ತೂರು: ಮಡಿಕೇರಿ, ಚಾರ್ಮಾಡಿ ಭಾಗಗಳಲ್ಲಿ ಗುಡ್ಡ ಕುಸಿತದ ಘಟನೆಗಳು ನಡೆಯುತ್ತಿದ್ದು, ಪುತ್ತೂರಿನಲ್ಲೂ ಅಂತಹದ್ದೇ ಅಪಾಯ ಕಾಣಿಸಿಕೊಂಡಿದೆ. ತೆಂಕಿಲ ದರ್ಖಾಸು ಎಂಬಲ್ಲಿ 400 ಮೀ. ಎತ್ತರದ ಗುಡ್ಡದ ನಡುವೆ 100 ಮೀ. ಉದ್ದಕ್ಕೆ ಆಳವಾಗಿರುವ ಬಿರುಕು ಕಾಣಿಸಿಕೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತೆಂಕಿಲ ದರ್ಖಾಸುನಲ್ಲಿರುವ ಗೇರು ಅಭಿವೃದ್ಧಿ ನಿಗಮದ ಗೇರು ತೋಟವಿರುವ ಗುಡ್ಡದಲ್ಲಿ ಬಿರುಕು ಕಾಣಿಸಿದ್ದು, ಕುಟುಂಬಗಳಿಗೆ ಆತಂಕ ಎದುರಾಗಿದೆ. ಸೋಮವಾರ ಮಧ್ಯಾಹ್ನ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದ್ದು, ಗುಡ್ಡದಲ್ಲಿ ಲಘು ಭೂ ಕಂಪನದ ಸಾಧ್ಯತೆ ಹೆಚ್ಚಾಗಿರುವ ಸೂಚನೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಗುಡ್ಡದಲ್ಲಿ ಬಿರುಕು ಕಾಣಿಸಿದ್ದು ರವಿವಾರ ಸ್ಥಳೀಯರ ಗಮನಕ್ಕೆ ಬಂದಿತ್ತು. ಗುಡ್ಡದ ಮಧ್ಯಭಾಗದಲ್ಲಿ 100 ಮೀ. ಉದ್ದಕ್ಕೆ ಭೂಮಿ ಬಿರುಕು ಬಿಟ್ಟಿದೆ. ಗುಡ್ಡದ ತುದಿಯಲ್ಲೂ ಅಡ್ಡ ಮತ್ತು ನೇರವಾಗಿ ಬಿರುಕು ಮೂಡಿದೆ. ಸ್ವಲ್ಪ ಕೆಳ ಭಾಗದಲ್ಲಿರುವ ಮೊಗೇರ್ಕಳ ಗರಡಿಯ ಬಳಿ ನೆಲದಿಂದ ಮಣ್ಣು ಮಿಶ್ರಿತ ನೀರು ಉಕ್ಕಿ ಹರಿಯುತ್ತಿದೆ. ಗುಡ್ಡದ ಈಗಿನ ಸ್ಥಿತಿ ಮೊಣ್ಣಂಗೇರಿಯಲ್ಲಿ ನಡೆದ ದುರಂತದ ನೆನಪು ಮಾಡಿಸಿ, ಜನರಲ್ಲಿ ಭೀತಿ ಸೃಷ್ಟಿಸಿದೆ.

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಪ್ರಭಾರ ಉಪನಿರ್ದೇಶಕಿ ಪದ್ಮಶ್ರೀ, ಅಂತರ್ಜಲ ಪರಿಶೋಧಕಿ ವಸುಧಾ ಅವರು ಸೋಮವಾರ ಮಧ್ಯಾಹ್ನ ತೆಂಕಿಲ ಗುಡ್ಡಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗುಡ್ಡದ ರಚನಾ ವಲಯ ಅಪಾಯಕಾರಿಯಾಗಿದೆ. ಇಲ್ಲಿನ ತೇವಾಂಶ ರಹಿತ ಪದರವು ಮಳೆಗಾಲದಲ್ಲಿ ಹೆಚ್ಚಿನ ಪ್ರಮಾಣದ ನೀರನ್ನು ಹೀರಿಕೊಳ್ಳುತ್ತಿದೆ. ಒಳಗೆ ಶೇಖರಣೆಗೊಂಡ ನೀರು ಹೊರಹೋಗುವ ಪ್ರಮಾಣ ಕಡಿಮೆ ಇರುವುದರಿಂದ ಒತ್ತಡ ನಿರ್ಮಾಣವಾಗಿ ಬಿರುಕು ಬಿಟ್ಟಿದೆ. ಇದು ಲಘು ಭೂಕಂಪನದ ಸಾಧ್ಯತೆಯೂ ಇದೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ.