Saturday, November 23, 2024
ಸುದ್ದಿ

57 ಗಂಟೆ ನೀರಿನಲ್ಲಿದ್ದು ಸಾವು ಗೆದ್ದು ಬಂದ ಅರ್ಚಕನ ರೋಚಕ ಕಥೆ – ಕಹಳೆ ನ್ಯೂಸ್

ಮೈಸೂರು: ಪ್ರಕೃತಿ ವಿರುದ್ಧ ಹೋರಾಡಬಾರದು ಎಂಬ ಮಾತಿದೆ. ಆದರೆ, ತುಂಬಿ ಹರಿಯುವ ಪ್ರವಾಹಕ್ಕೆ ಧುಮುಕಿದ ಅರ್ಚಕರೊಬ್ಬರು 57 ಗಂಟೆಗಳ ನಂತರ ಪವಾಡ ಸದೃಶ ರೀತಿಯಲ್ಲಿ ಬದುಕಿ ಬಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ನೇಹಿತರೊಂದಿಗೆ ಬಾಜಿ ಕಟ್ಟಿ ಸಾಹಸ ಪ್ರದರ್ಶಿಸಲು ತುಂಬಿ ಹರಿಯುತ್ತಿದ್ದ ಕಪಿಲಾ ನದಿಗೆ ಧುಮುಕಿ ನಾಪತ್ತೆಯಾಗಿದ್ದ ಅರ್ಚಕ ವೆಂಕಟೇಶ್ ಅವರು 57 ಗಂಟೆಗಳ ಕಾಲ ನದಿಯಲ್ಲಿ ಆಶ್ರಯ ಪಡೆದು ಯಾರ ಸಹಾಯವೂ ಇಲ್ಲದೆ ಬದುಕಿ ಬಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

57 ಗಂಟೆಗಳ ಕಾಲ ನೀರಿನಲ್ಲಿ ಆದ ಅನುಭವಗಳನ್ನು ಅರ್ಚಕ ವೆಂಕಟೇಶ್ ಅವರ ಮಾತಿನಲ್ಲೇ ಕೇಳಿ. ‘ಯೋಗ, ಪ್ರಾಣಾಯಾಮದಲ್ಲಿ ಪರಿಣಿತನಾಗಿರುವ ನಾನು ಹಲವಾರು ಸಾಹಸಗಳಲ್ಲಿ ಭಾಗಿಯಾಗಿದ್ದೇನೆ. ಆದರೆ, ಕಪಿಲಾ ನದಿಗೆ ಧುಮುಕಿದ್ದು ಒಂದು ವಿರೋಚಿತ ಅನುಭವ.

ಅಂದು ನಾನು ಸೇತುವೆ ಮೇಲಿಂದ ಬಿದ್ದಾಗ ನೀರಿನೊಳಗೆ ಹೋಗಿಬಿಟ್ಟೆ. ಈಜುಪಟುವಾಗಿರುವ ನನ್ನನ್ನು ಪ್ರವಾಹ ಭಾರೀ ದೂರ ಕೊಂಡೊಯ್ತು. ಪ್ರವಾಹದಲ್ಲೇ ಈಜುತ್ತ ಹೋದೆ. ಆದರೆ, ಆಶ್ರಯ ಪಡೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಭಾರೀ ದಣಿವಾಯಿತು.

ನೀರಿಗೆ ಧುಮುಕಿದಾಗ ನಾನು ನೀರು ಕುಡಿಯದಿದ್ದ ಹಿನ್ನೆಲೆಯಲ್ಲಿ ಆಯಾಸವಾಗಲಿಲ್ಲ. ಆದರೆ, ನೀರಿನಲ್ಲಿ ಸಾಗುತ್ತಿದ್ದಂತೆ ಸುಸ್ತಾಯಿತು. ಹಾಗೆಯೇ ಮುಂದೆ ಈಜಿದೆ. ಅಲ್ಲಿ ಹೈರಿಗೆ ಜಾಗದಲ್ಲಿದ್ದ ಸೇತುವೆ ಕಾಣಿಸಿತು. ತಕ್ಷಣ ಆಸರೆ ಸಿಕ್ಕ ಸಣ್ಣ ಜಾಗದಲ್ಲಿ ಆಶ್ರಯ ಪಡೆದೆ.

ಸೇತುವೆ ಕೆಳಗೆ ಚಿಕ್ಕ ಕಟ್ಟೆ ಇತ್ತು. ಆ ಕಟ್ಟೆಯಲ್ಲೇ ಕುಳಿತು 57 ಗಂಟೆ ಕಳೆದೆ. ದೇವರ ಕೃಪೆಯಿಂದ ಯಾರಾದರೂ ಕಾಪಾಡುತ್ತಾರೆ ಎಂದು ಭಾವಿಸಿದ್ದೆ. ಆದರೆ, ಯಾರೂ ಸಹಾಯಕ್ಕೆ ಬರಲಿಲ್ಲ. ಆ ಭಯದಲ್ಲಿ ಸತ್ತು ಹೋಗುತ್ತೇನೋ ಎಂದುಕೊಂಡೆ. ನೀರು ಕಡಿಮೆಯಾದ ಬಳಿಕ ಹೋದರಾಯ್ತು ಎಂದುಕೊಂಡೇ ಕಾಲ ಕಳೆದೆ.

56 ಗಂಟೆ ಕಳೆದ ನಂತರ ಹಸಿವು ಜಾಸ್ತಿ ಆಯ್ತು. ಆ ವೇಳೆಗೆ ಪ್ರವಾಹದ ತೀವ್ರತೆ ಕಡಿಮೆಯಾಗಿತ್ತು. ಸಮೀಪದಲ್ಲೇ ಮಕ್ಕಳು ನೀರಿನಲ್ಲಿ ಆಟವಾಡುತ್ತಿರುವ ದೃಶ್ಯ ಕಾಣಿಸಿತು. ಧೈರ್ಯ ಮಾಡಿ ಅಲ್ಲಿಂದ ಮುಂದೆ ಹೋಗಿ ನದಿ ಆವರಣದಲ್ಲೇ ಇದ್ದ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ತೆರಳಿ ದೇವರಿಗೆ ನಮಸ್ಕಾರ ಹಾಕಿ ಎಳೆನೀರು ಕುಡಿದು ದಣಿವಾರಿಸಿಕೊಂಡೆ.

ನಂತರ ಸಾವರಿಸಿಕೊಂಡು ಮನೆ ಸೇರಿದೆ’ ಹೀಗೆ ತನ್ನ ಅನುಭವಗಳನ್ನು ಹಂಚಿಕೊಂಡ ಅರ್ಚಕ ವೆಂಕಟೇಶ್ ಅವರು, ಇಂತಹ ದುಸ್ಸಾಹಸಕ್ಕೆ ಯಾರೂ ಮುಂದಾಗಬಾರದು ಎಂದು ಕಿವಿಮಾತು ಹೇಳಿದರು. ಜೀವನವೇ ಬೇರೆ, ಸಾಹಸವೇ ಬೇರೆ. ನಾನು ದೇವರ ಕೃಪೆಯಿಂದ ಬದುಕಿ ಬಂದಿದ್ದೇನೆ. ಇಂದಿನ ಯುವಕರು ಸಾಹಸ ಮಾಡುವ ನೆಪದಲ್ಲಿ ಹಲವಾರು ದುಸ್ಸಾಹಸಗಳಿಗೆ ಕೈ ಹಾಕುತ್ತಾರೆ. ಮುಂದೆ ಯಾರೂ ಇಂತಹ ಪ್ರಯತ್ನ ಮಾಡಬೇಡಿ ಎಂದು ಕೈ ಮುಗಿದು ವಿನಂತಿಸಿಕೊಂಡರು.