ಹೊಸದಿಲ್ಲಿ: ಸಂಪರ್ಕ ಸೇವೆಗಳು ಸೇರಿದಂತೆ ಜಮ್ಮು-ಕಾಶ್ಮೀರದಲ್ಲಿ ಹೇರಲಾಗಿರುವ, ನಿರ್ಬಂಧಗಳನ್ನು ಹಿಂಪಡೆಯುವಂತೆ ಆದೇಶ ನೀಡಲು ಸುಪ್ರೀಂಕೋರ್ಟ್ ಮಂಗಳವಾರ ನಿರಾಕರಿಸಿದೆ.
ರಾತ್ರೋರಾತ್ರಿ ಏನೂ ಮಾಡಲು ಸಾಧ್ಯವಿಲ್ಲ. ಜಮ್ಮು-ಕಾಶ್ಮೀರದಲ್ಲಿ ಜನಜೀವನ ಸಾಮಾನ್ಯ ಸ್ಥಿತಿಗೆ ತರಲು ಸರಕಾರಕ್ಕೆ ಸಮಯಾವಕಾಶ ಬೇಕಾಗುತ್ತದೆ. ಎರಡು ವಾರಗಳ ಬಳಿಕ ಈ ವಿಚಾರವನ್ನು ಮತ್ತೊಮ್ಮೆ ಕೈಗೆತ್ತಿಕೊಳ್ಳುತ್ತೇವೆ ಎಂದು ಸಾಮಾಜಿಕ ಕಾರ್ಯಕರ್ತ ತೆಹ್ಸೀನ್ ಪೂನಾವಾಲಾ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ಜಸ್ಟಿಸ್ ಅರುಣ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಹೇಳಿದೆ.
2016ರ ಜುಲೈನಲ್ಲಿ ಬುರ್ಹಾನ್ ವಾನಿ ಮೃತಪಟ್ಟ ಸಂದರ್ಭದಲ್ಲಿ ರಾಜ್ಯದಲ್ಲಿ ಉಂಟಾದ ಪ್ರತಿಭಟನೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಕಾಶ್ಮೀರದಲ್ಲಿ ನಿರ್ಬಂಧ ಹೇರಲಾಗಿದೆ. ಅಲ್ಲಿನ ಪರಿಸ್ಥಿತಿಯನ್ನು ಆಧರಿಸಿ ಕೆಲವೇ ದಿನಗಳಲ್ಲಿ ನಿರ್ಬಂಧವನ್ನು ಸಡಿಲಿಸಲಾಗುವುದು. ಪ್ರತಿದಿನ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಲಾಗುವುದು ಎಂದು ಕೇಂದ್ರದ ಪರ ವಾದ ಮಂಡಿಸಿದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಸುಪ್ರೀಂಕೋರ್ಟ್‍ಗೆ ತಿಳಿಸಿದ್ದಾರೆ.