ಪುತ್ತೂರು: ನಗರದ ತೆಂಕಿಲ ದರ್ಖಾಸಿನ ಗುಡ್ಡ ಭಾಗದಲ್ಲಿ ಕಂಡು ಬಂದಿರುವ ಬಿರುಕು ಮಂಗಳವಾರ ಮತ್ತಷ್ಟು ಹೆಚ್ಚಾಗಿ, ಮಣ್ಣಿನ ಪದರ ಕೆಳಭಾಗಕ್ಕೆ ಕುಸಿದಿರುವ ಆತಂಕಕಾರಿ ಘಟನೆ ನಡೆದಿದೆ. 2 ದಿನಗಳ ಕಾಲ ಕಡಿಮೆಯಾಗಿದ್ದ ಮಳೆ ಸೋಮವಾರ ರಾತ್ರಿ ಮತ್ತೆ ಬಿರುಸು ಪಡೆದಿರುವುದರಿಂದ ಬಿರುಕಿನ ಅಪಾಯ ಹೆಚ್ಚಾಗುವ ಅನುಮಾನ ಮೂಡಿಸಿದೆ.
ಈಗಾಗಲೇ ಸ್ಥಳಿಯ ನಿವಾಸಿಗಳು ಸಮುದಾಯ ಭವನ ಮತ್ತು ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದು ಜೀವನ ಕೊಂಡಿಯಾಗಿದ್ದ ಆವಾಸ ಸ್ಥಳವನ್ನು ಶಾಶ್ವತವಾಗಿ ಕಳೆದುಕೊಳ್ಳುವ ಭೀತಿ ಸ್ಥಳೀಯರನ್ನು ಕಾಡುತ್ತಿದೆ.
ರವಿವಾರ ಗುಡ್ಡದಲ್ಲಿ 200 ಮೀ. ಉದ್ದ ಮತ್ತು 1 ಇಂಚಿನಷ್ಟು ಅಗಲಕ್ಕೆ ಕಾಣಿಸಿಕೊಂಡಿದ್ದ ಬಿರುಕು ಮಂಗಳವಾರ 3 ಇಂಚಿನಷ್ಟು ವಿಸ್ತಾರಗೊಂಡಿದೆ. ಮಣ್ಣಿನ ಪದರ 3 ಇಂಚಿನಷ್ಟು ಕೆಳಕ್ಕೆ ಕುಸಿದಿದೆ. ನೇರ ಮತ್ತು ಅಡ್ಡಲಾಗಿ ಬಿರುಕು ಕಾಣುತ್ತಿದೆ.
ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಸೋಮವಾರ ಮಧ್ಯಾಹ್ನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಸ್ಥಳದಲ್ಲಿ ಲಘು ಭೂ ಕಂಪನ ಸಂಭವಿಸುವ ಸಾಧ್ಯತೆ ಇರುವ ಸೂಚನೆ ನೀಡಿದ್ದರು.ಈ ಹಿನ್ನೆಲೆಯಲ್ಲಿ ಅಲ್ಲಿನ 11 ಕುಟುಂಬಗಳನ್ನು ಉಪವಿಭಾಗಾಧಿಕಾರಿ ಎಚ್.ಕೆ. ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಸೋಮವಾರ ರಾತ್ರಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಸಮುದಾಯ ಕೇಂದ್ರಕ್ಕೆ ಶಾಸಕ ಅಂಗಾರ ಭೇಟಿ ನೀಡಿ ಶಾಶ್ವತ ಪರಿಹಾರ ಕಲ್ಪಿಸುವ ಭರವಸೆ ನೀಡಿದ್ದಾರೆ. ಗುಡ್ಡ ಬಿರುಕು ಬಿಟ್ಟ ಸ್ಥಳಕ್ಕೆ ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ನ.ಪಂ., ತಾ.ಪಂ. ಜನಪ್ರತಿನಿಧಿಗಳು, ಅಧಿಕಾರಿಗಳು ಸಂತ್ರಸ್ತರನ್ನು ಭೇಟಿ ಮಾಡಿದ್ದಾರೆ.