ನವದೆಹಲಿ: ಪುಲ್ವಾಮಾ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಬಾಲಕೋಟ್‍ನಲ್ಲಿ ಉಗ್ರರ ಅಡಗುತಾಣಗಳ ಮೇಲೆ ದಾಳಿ ನಡೆಸಿ ಪರಾಕ್ರಮ ಮೆರೆದಿದ್ದ ಭಾರತೀಯ ವಾಯುಪಡೆಯ (ಐಎಎಫ್)ವೀರ ಪೈಲಟ್, ವಿಂಗ್ ಕಮಾಂಡರ್ ಗಳಿಗೆ 73ನೇ ಸ್ವಾತಂತ್ರ್ಯೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ ವಾಯುಸೇನಾ ಶೌರ್ಯ ಪ್ರಶಸ್ತಿ ನೀಡಲು ಕೇಂದ್ರ ಸರಕಾರ ನಿರ್ಧರಿಸಿದೆ.
ಪಾಕಿಸ್ತಾನದ ಬಾಲಕೋಟ್ ನಗರದಲ್ಲಿನ ಜೈಶ್ ಉಗ್ರರ ಶಿಬಿರಗಳ ಮೇಲೆ ದಾಳಿ ನಡೆಸಿದ್ದ ಐಎಎಫ್ ವಿಂಗ್ ಕಮಾಂಡರ್‍ಗಳಾದ ಅಮಿತ್ ರಂಜನ್, ಸ್ವಾರ್ಡರ್ನ್ ಲೀಡರ್‍ಗಳಾದ ರಾಹುಲ್ ಬಾಸೋಯ, ಪಂಕಜ್ ಭುಜಾಡೆ, ಬಿಕೆಎನ್ ರೆಡ್ಡಿ ಮತ್ತು ಶಶಾಂಕ್ ಸಿಂಗ್‍ಗೆ ವಾಯುಸೇನಾ ಶೌರ್ಯ ಪದಕ ನೀಡಿ ಗೌರವಿಸಲಿದೆ.
ಇವರೆಲ್ಲಾ ಐಎಎಫ್‍ನ ಮೀರಜ್ 2000 ಯುದ್ಧ ವಿಮಾನದ ಪೈಲಟ್‍ಗಳಾಗಿದ್ದಾರೆ. 2019ರ ಫೆಬ್ರುವರಿಯಲ್ಲಿ ಬಾಲಕೋಟ್‍ನಲ್ಲಿನ ಉಗ್ರರ ಶಿಬಿರಗಳ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆಸಿತ್ತು. ಪುಲ್ವಾಮಾದಲ್ಲಿ ಪಾಕಿಸ್ತಾನ ಮೂಲದ ಜೈಶ್ ಉಗ್ರ ಸಿಆರ್ ಪಿಎಫ್‍ನ 40 ಯೋಧರ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದ ಪರಿಣಾಮ ಹುತಾತ್ಮರಾಗಿದ್ದರು. ಈ ಕೃತ್ಯಕ್ಕೆ ಭಾರತೀಯ ಸೇನೆ ಬಾಲಕೋಟ್ ಮೇಲೆ ದಾಳಿ ನಡೆಸಿ ಪ್ರತೀಕಾರ ತೀರಿಸಿಕೊಂಡಿತ್ತು.