Monday, January 20, 2025
ಸುದ್ದಿ

ಪಿಲೋಮಿನಾದಲ್ಲಿ ‘ಯಕ್ಷಾಮೃತ’ ಉದ್ಘಾಟನೆ – ಕಹಳೆ ನ್ಯೂಸ್

ಪುತ್ತೂರು: ವಿದ್ಯಾರ್ಥಿ ಬದುಕಿನಲ್ಲಿ ಕಲೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದರಿಂದ ವಿದ್ಯೆ ಗಳಿಕೆಯ ವೇಗವು ಹೆಚ್ಚುತ್ತದೆ. ಕಲೆಯನ್ನು ಪ್ರೀತಿಸುವುದು ನಮ್ಮ ಮನೆ, ಸಮಾಜ, ಪರಿಸರ ಹಾಗೂ ದೇಶವನ್ನು ಪ್ರೀತಿಸಿದಂತೆ ಎಂದು ಪುತ್ತೂರಿನ ಖ್ಯಾತ ವೈದ್ಯ ಹಾಗೂ ಶಾಸ್ತ್ರೀಯ ಕಲೆಗಳ ಕಲೋಪಾಸಕ ಡಾ. ಹರಿಕೃಷ್ಣ ಪಾಣಾಜೆ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂತ ಫಿಲೋಮಿನಾ ಕಾಲೇಜಿನ ಭಾರತೀಯ ಶಾಸ್ತ್ರೀಯ ಮತ್ತು ಜನಪದ ಕಲೆಗಳ ಅಧ್ಯಯನ ಕೇಂದ್ರ ‘ಯಕ್ಷಕಲಾ ಕೇಂದ್ರ’ ಇದರ ಆಶ್ರಯದಲ್ಲಿ ‘ಯಕ್ಷಾಮೃತ’ ನೃತ್ಯ ತರಬೇತಿ ಕುರಿತು ವಿದ್ಯಾರ್ಥಿಗಳು ಹಾಗೂ ಆಸಕ್ತ ಸಾರ್ವಜನಿಕರಿಗೆ ಹಮ್ಮಿಕೊಳ್ಳಲಾದ 50 ಘಂಟೆಗಳ ಅವಧಿಯ ಸರ್ಟಿಫಿಕೇಟ್ ಕೋರ್ಸನ್ನು ಸ್ಪಂದನ ಸಭಾಭವನದಲ್ಲಿ ಉದ್ಘಾಟಿಸಿ, ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಯಕ್ಷಗಾನವು ನಮ್ಮ ಜಿಲ್ಲೆಯ ಒಂದು ವಿಶಿಷ್ಟ ಕಲೆ. ಸಾಹಿತ್ಯ, ಸಂಗೀತ, ತಾಳ, ಲಯ, ಮಾತುಗಾರಿಕೆ, ನೃತ್ಯ, ವಸ್ತ್ರಾಲಂಕಾರಗಳನ್ನು ಒಳಗೊಂಡಿರುವ ಈ ಯಕ್ಷ ಕಲೆಯನ್ನು ಚಿಕ್ಕ ಮಕ್ಕಳಿಂದ ತೊಡಗಿ, ವೃದ್ಧಾಪ್ಯದಲ್ಲಿರುವವರೂ ಇಷ್ಟಪಡುತ್ತಾರೆ. ಕಲೆಯು ವ್ಯಕ್ತಿಯ ಬೆಳವಣಿಗೆಯೊಂದಿಗೆ ಸಮಾಜದ ಅಭ್ಯುದಯಕ್ಕೂ ಸಹಕಾರಿ. ಕಲೆಯ ಬೆಳವಣಿಗೆಗೆ ಕಲಾವಿದರ ಪಾಲುದಾರಿಕೆಯೊಂದಿಗೆ ಪ್ರೇಕ್ಷಕ ವರ್ಗದ ಪ್ರೋತ್ಸಾಹವೂ ಅತಿ ಅವಶ್ಯ. ಈ ಸಂಸ್ಥೆಯಲ್ಲಿ ಆರಂಭಗೊಳ್ಳುವ ಯಕ್ಷಾಮೃತದ ಪರಿಮಳ ಎಲ್ಲೆಡೆಗೂ ಪಸರಿಸಲಿ ಎಂದು ಶುಭ ಹಾರೈಸಿದರು.

ಗೌರವ ಅತಿಥಿಗಳಾಗಿ ಭಾಗವಹಿಸಿದ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ ಮಾತನಾಡಿ, ಪ್ರಸ್ತುತ ವಿದ್ಯಾರ್ಥಿಗಳು ಬರೆಯುವುದು ಕಮ್ಮಿ, ಟೈಪ್ ಮಾಡುವುದು ಜಾಸ್ತಿ. ವಿದ್ಯಾರ್ಥಿಗಳಲ್ಲಿ ಸೃಜನಶೀಲತೆಯು ಕಡಿಮೆಯಾಗುತ್ತಿರುವುದು ಖೇದಕರ ಸಂಗತಿ. ಕಲೋಪಾಸನೆಯನ್ನು ರಾಜಕೀಯ ಲಾಭ, ಹಣ ಸಂಪಾದನೆ ಅಥವಾ ಇನ್ಯಾವುದೋ ಉದ್ದೇಶಕ್ಕೆ ಕೈಗೊಳ್ಳುವುದು ಸಮಂಜಸವಲ್ಲ. ಕಲೆಯು ಒಂದು ವ್ಯಕ್ತಿಗೆ ಜೀವಂತಿಕೆ ನೀಡಬಲ್ಲ ಮಾಧ್ಯಮ. ಕಲಾ ನಿಮಿತ್ತ ಗೌರವಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ. ಕಲಾರಾಧನೆಯಿಂದ ವ್ಯಕ್ತಿತ್ವ ಮತ್ತು ಆರೋಗ್ಯವಂತ ಸಮಾಜ ನಿರ್ಮಾಣವಾಗಲಿ ಎಂದರು.

ಅತಿಥಿಗಳಾಗಿ ಭಾಗವಹಿಸಿದ ಸಂತ ಪಿಲೊಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವಿಜಯ್ ಲೋಬೊ ಮಾತನಾಡಿ, ಈ ಸಂಸ್ಥೆಯಲ್ಲಿ ಎಲ್ಲಾ ರೀತಿಯ ಕಲಾ ಪ್ರಕಾರಗಳಿಗೂ ಸಮಾನ ಪ್ರಾಶಸ್ತ್ಯ ನೀಡಲಾಗುತ್ತಿದೆ. ಶಾಸ್ತ್ರೀಯ ಕಲೆಗಳಲ್ಲಿ ಬಹಳಷ್ಟು ಪ್ರತಿಭಾನ್ವಿತ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿರುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದು ಹೇಳಿ, ಶುಭ ಹಾರೈಸಿದರು.

ಸಭಾಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಮಾತನಾಡಿ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸುವುದು ಶಿಕ್ಷಣ ಸಂಸ್ಥೆಯ ಆದ್ಯ ಕರ್ತವ್ಯ. ಮಾನವನ ಜೀವನ ನಶ್ವರವಾದರೂ, ಕಲೆಯು ಶಾಶ್ವತವಾಗಿರಬಲ್ಲುದು. ಕಲಾವಿದರೊಂದಿಗೆ ಪ್ರೇಕ್ಷಕ ವರ್ಗವೂ ಕೈಜೋಡಿಸಿದಾಗ ಕಲೆಯ ಪ್ರಾವಿತ್ರ್ಯತೆ ಅಜರಾಮರವಾಗಿರಬಲ್ಲುದು ಎಂದರು.

ವೇದಿಕೆಯಲ್ಲಿ ಯಕ್ಷಾಮೃತದ ಸಂಪನ್ಮೂಲ ವ್ಯಕ್ತಿ ಬಾಲಕೃಷ್ಣ ಆರ್ಲಪದವು ಉಪಸ್ಥಿತರಿದ್ದರು.
ಅನುರಾಧಾ ಭಾರದ್ವಾಜ್ ಬಿ ಆರ್ ಪ್ರಾರ್ಥಿಸಿದರು. ಕಾಲೇಜಿನ ಯಕ್ಷಕಲಾ ಕೇಂದ್ರದ ಸಂಯೋಜಕ ಪ್ರಶಾಂತ್ ರೈ ಸ್ವಾಗತಿಸಿ, ಯಕ್ಷಾಮೃತ ಸಂಯೋಜಕಿ ರಾಜೇಶ್ವರಿ ಎಮ್ ವಂದಿಸಿದರು. ಶ್ರೀದೇವಿ ಕೆ ಕಾರ್ಯಕ್ರಮ ನಿರೂಪಿಸಿದರು.