ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ನೆರೆ ಹಾವಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲ ಎಂದು ತೀವ್ರ ಅಸಮಾಧಾನವನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಉಂಟಾಗಿರುವ ದೊಡ್ಡ ಪ್ರಮಾಣದ ನೆರೆ ಹಾವಳಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಒಂದು ಸಭೆ ಕೂಡ ಮಾಡಿಲ್ಲ. ಹಣವನ್ನೂ ನೀಡಿಲ್ಲ. ಅವರಿಗೆ ಏನು ಕಷ್ಟ ಇದೆಯೋ ಗೊತ್ತಿಲ್ಲ. ಇಲ್ಲಿಯವರೆಗೂ ರಾಜ್ಯಕ್ಕೆ ಒಂದು ರೂಪಾಯಿಯೂ ಕೇಂದ್ರದಿಂದ ಬಂದಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ನೆರೆ ಹಾವಳಿ ಬಗ್ಗೆ ಕೇಂದ್ರಕ್ಕೆ ವರದಿ ನೀಡಲಿದ್ದು, ಆನಂತರ ಕೇಂದ್ರ ತಂಡ ಬಂದು ಅಧ್ಯಯನ ಮಾಡಿ ಹೋಗುತ್ತದೆ. ಆಗಲೂ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಖುದ್ದಾಗಿ ಪ್ರಧಾನಿಯವರನ್ನು ಭೇಟಿ ಮಾಡುವುದಾಗಿ ಗೌಡರು ಹೇಳಿದರು. ಈಗಾಗಲೇ ಪ್ರಧಾನಿಯವರಿಗೆ ಮಧ್ಯಂತರ ಪರಿಹಾರ ನೀಡುವಂತೆ ಪತ್ರ ಬರೆದಿದ್ದು, ಅಗತ್ಯಬಿದ್ದರೆ ಮತ್ತೊಂದು ಪತ್ರ ಬರೆಯಲಾಗುವುದು ಎಂದರು. ಪ್ರವಾಹ ಪರಿಸ್ಥಿತಿ ಕಡಿಮೆಯಾದ ನಂತರ ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ಕೊಡುವುದಾಗಿ ತಿಳಿಸಿದರು. ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಹಿಂದೆಂದೂ ಕಂಡರಿಯದಂತಹ ಪ್ರವಾಹ ಉಂಟಾಗಿದೆ.
ಕೇಂದ್ರ ಸರ್ಕಾರ ಹೇಳುವುದೊಂದು, ಮಾಡುವುದೊಂದು ಆಗಿದೆ. ಮಕ್ಕಳ ಅಪೌಷ್ಟಿಕತೆ, ರೈತರ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳಿದ್ದು, ಕೇಂದ್ರ ಸರ್ಕಾರ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು ಎಂದರು. ಇದೇ ಸಂದರ್ಭದಲ್ಲಿ ನಾಡಿನ ಸಮಸ್ತ ಜನತೆಗೆ 73ನೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಬೆಂಗಳೂರು ನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.