ಮೂಡಬಿದ್ರೆಯ ಕಲ್ಲಬೆಟ್ಟಿನಲ್ಲಿರುವ ಎಕ್ಸಲೆಂಟ್ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆ ಅರ್ಥಪೂರ್ಣವಾಗಿ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಮೂಲ್ಕಿ-ಮೂಡಬಿದ್ರೆ ಮಾಜಿ ಶಾಸಕ ಹಾಗೂ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಗೌರವ ಅಧ್ಯಕ್ಷ ಅಭಯಚಂದ್ರ ಜೈನ್, ಇಂದು ಭಾರತ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿಯತ್ತ ಮುನ್ನುಗ್ಗುತ್ತಿದ್ದೆ. ವಿಮಾನದಿಂದ ಹಿಡಿದು ಚಂದ್ರಯಾನದವರೆಗೂ ವಿಶೇಷ ಸಾಧನೆ ಮಾಡಿದ್ದೇವೆ. ಶಿಕ್ಷಣ ಕ್ಷೇತ್ರದಲ್ಲಿನ ಅಭೂತಪೂರ್ವ ಬೆಳವಣಿಗೆಗಳಿಂದಾಗಿ ನಮ್ಮ ದೇಶದ ಯುವಕರು ವಿಶ್ವಾದ್ಯಂತ ಹಲವಾರು ಉನ್ನತ ಹುದ್ದೆಗಳನ್ನು ಏರುವಂತಾಗಿದೆ, ಮುಂದಿನ ದಿನಗಳಲ್ಲಿ ಭಾರತ ‘ವಿಶ್ವಗುರು’ ಆಗುವುದರಲ್ಲಿ ಸಂಶಯವಿಲ್ಲ. ಭಾರತಕ್ಕೆ ಅನೇಕರ ತ್ಯಾಗ ಬಲಿದಾನದಿಂದ ಸ್ವಾತಂತ್ರ್ಯ ಲಭಿಸಿದೆ. ಅದನ್ನು ದೇಶದ ಪ್ರಜ್ಞಾವಂತ ನಾಗರೀಕರಾದ ನಾವು ಉಳಿಸಿಕೊಳ್ಳಬೇಕಿದೆ. ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಭಾರತ ಮಾತೆಯ ಸೇವೆ ಮಾಡುವಂತಾಗಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಆಗಮಿಸಿದ್ರು. ಈ ವಿದ್ಯಾಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಯುವರಾಜ್ ಜೈನ್, ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಮುಖ್ಯೋಪಾಧ್ಯಾಯ ಗುರುಪ್ರಸಾದ್ ಶೆಟ್ಟಿ, ಆಡಳಿತಾಧಿಕಾರಿ ಹರೀಶ್ ಶೆಟ್ಟಿ, ಉಪನ್ಯಾಸಕ ವರ್ಗದವರು, ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕನ್ನಡ ವಿಭಾಗದ ಅಧ್ಯಾಪಕ ರಾಮಕೃಷ್ಣ ಭಟ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ತದನಂತರ ಪ್ರೌಢಶಾಲೆ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.