ಹುಬ್ಬಳ್ಳಿ(ಧಾರವಾಡ) : ಉತ್ತರ ಕರ್ನಾಟಕ ಭಾಗದ ರೈತರ ಭರವಸೆಯ ಬೆಳೆಯಾದ ಕಡಲೆಗೆ ಬೆಂಬಲ ಬೆಲೆ ನಿಗದಿ ಮಾಡಿ, ಖರೀದಿ ಕೇಂದ್ರಗಳನ್ನು ಸ್ಥಾಪಿಸಬೇಕೆಂದು ಜೆಡಿಎಸ್ ತಾಲೂಕು ಯುವ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.
ಈ ಭಾಗದ ರೈತರು ಕಡಲೆ ಬೆಳೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇಳುವರಿ ಕಂಡಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ಈಗಾಗಲೇ ಗಣನೀಯ ಪ್ರಮಾಣದಲ್ಲಿ ಬೆಲೆ ಕುಸಿದಿದೆ. ರಾಜ್ಯ ಸರ್ಕಾರ ಕೂಡಲೇ ಹುಬ್ಬಳ್ಳಿ ಹಾಗೂ ನವಲಗುಂದ ಸೇರಿದಂತೆ ಇತರೆ ಭಾಗಗಳಲ್ಲಿ ಕಡಲೆ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು ಎಂದು ಶಾಸಕ ಎನ್.ಹೆಚ್. ಕೋನರೆಡ್ಡಿ ಒತ್ತಾಯಿಸಿದರು.
ತಾಲೂಕಿನ ಕುಸುಗಲ್ ಗ್ರಾಮದಲ್ಲಿ ರೈತರಿಗೆ ಬೆಳೆವಿಮೆ ಪರಿಹಾರ ಬಿಡುಗಡೆ ಹಾಗೂ ಕಡಲೆ ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯಿಸಿ ಯುವ ಜೆಡಿಎಸ್ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ರಸ್ತೆ ತಡೆ ಹಾಗೂ ಬೃಹತ್ ಪ್ರತಿಭಟನೆಯಲ್ಲಿ ನೇತೃತ್ವ ವಹಿಸಿ ಶಾಸಕರು ಮಾತನಾಡಿದರು.
ಕಡಲೆಗೆ ಬೆಂಬಲ ಬೆಲೆ ನಿಗದಿ ಪಡಿಸುವಂತೆ ಈಗಾಗಲೇ ಸದನ ಸಮಿತಿಯ ಉಪ ಸಂಪುಟ ಸಮಿತಿ ಅಧ್ಯಕ್ಷರು ಹಾಗೂ ಕಾನೂನು ಸಚಿವರಾದ ಟಿ.ಬಿ. ಜಯಚಂದ್ರ, ಸದಸ್ಯರಾದ ಹೆಚ್.ಕೆ. ಪಾಟೀಲ್, ಕೃಷ್ಣ ಭೈರೇಗೌಡ, ಯು.ಟಿ. ಖಾದರ್ ರನ್ನು ಖುದ್ದಾಗಿ ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ.
ಸಂಕ್ರಾತಿಯ ನಂತರ ಶೀಘ್ರದಲ್ಲಿಯೇ ಕಡಲೆ ಖರೀದಿ ಕೇಂದ್ರಗಳನ್ನು ಆರಂಭಿಸುವ ಭರವಸೆ ನೀಡಿದ್ದರು. ಆದರೆ, ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸದಿರುವುದರಿಂದ ರೈತರಿಗೆ ಸಂಕಷ್ಟ ಎದುರಾಗಿದೆ, ಇಂದು ಅನಿವಾರ್ಯವಾಗಿ ಸಾವಿರಾರು ರೈತರು ಹಾಗೂ ಜೆಡಿಎಸ್ ಕಾರ್ಯಕರ್ತರೊಂದಿಗೆ ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶಾಸಕ ಕೋನರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಜೆಡಿಎಸ್ ರಾಜ್ಯ ರೈತ ಘಟಕದ ಅಧ್ಯಕ್ಷ ಗಂಗಾಧರ ಪಾಟೀಲ ಕುಲಕರ್ಣಿ, ನವಲಗುಂದ ತಾಲೂಕು ಜೆಡಿಎಸ್ ಅಧ್ಯಕ್ಷ ವೀರಣ್ಣ ನೀರಲಗಿ, ಹುಬ್ಬಳ್ಳಿ ತಾಲೂಕು ಜೆಡಿಎಸ್ ಅಧ್ಯಕ್ಷ ಶಿವಣ್ಣ ಹುಬ್ಬಳ್ಳಿ, ಜೆಡಿಎಸ್ ಮುಖಂಡರಾದ ವೀರನಗೌಡ ಮರಿಗೌಡರ, ಜೆಡಿಎಸ್ ಯುವ ಘಟಕದ ಗಿರೀಶ ಹಂಗರಕಿ, ರಾಜು ಸಂಕರಡ್ಡಿ, ಕೆಂಚಪ್ಪ ಶಿವಳ್ಳಿ, ರಾಜು ಇಮ್ಮಡಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.