ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ವಿವೇಕಾನಂದ ಕ್ಯಾಂಪಸ್‍ನ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ – ಕಹಳೆ ನ್ಯೂಸ್
ಪುತ್ತೂರು: ಶತಮಾನಗಳ ಹೋರಾಟಗಳ ನಂತರ ಭಾರತ ಸ್ವಾತಂತ್ರ್ಯ ದಕ್ಕಿಸಿಕೊಂಡಿತ್ತು. ಕಾಶ್ಮೀರ ನಮ್ಮದಾಗಿದ್ದರೂ, ನಮ್ಮಿಂದ ದೂರವೇ ಉಳಿದಿತ್ತು. ಆದರೆ ಸರ್ಕಾರದ ದಿಟ್ಟ ನಡೆಯಿಂದಾಗಿ ಇಂದು ಕಾಶ್ಮೀರ ನಿಜಾರ್ಥದಲ್ಲಿ ಅಖಂಡ ಭಾರತ ಭಾಗವಾಗಿ ಬದಲಾಗಿದೆ. ಆ ಮೂಲಕ 73ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಗೆ ಹೊಸ ಅರ್ಥ ಸಿಕ್ಕಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಅವರು ವಿವೇಕಾನಂದ ಕ್ಯಾಂಪಸ್‍ನಲ್ಲಿರುವ ಕ್ರೀಡಾಂಗಣದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ವಿವೇಕಾನಂದ ಪದವಿ, ಪದವಿಪೂರ್ವ, ತಾಂತ್ರಿಕ ಹಾಗೂ ಪಾಲಿಟೆಕ್ನಿಕ್ ಮಹಾವಿದ್ಯಾಲಯಗಳು ಆಯೋಜಿಸಿದ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ರಕ್ಷಾಬಂಧನದ ಹಿನ್ನೆಲೆ ಮಾತನಾಡಿ, ಭಾತೃತ್ವದ ಮಹತ್ವವನ್ನು ನಾವಿಂದು ಜಗತ್ತಿಗೆ ತಿಳಿಸಬೇಕಾದ ಅನಿವಾರ್ಯತೆ ಇದೆ. ಬೇಧ-ಭಾವವಿಲ್ಲದೆ ಎಲ್ಲರೂ ಒಟ್ಟಾಗಿ ದೇಶದ ಅಭಿವೃದ್ಧಿಗಾಗಿ ಶ್ರಮಿಸಬೇಕಾಗಿದೆ. ಪ್ರಕೃತಿ ಮಾತೆ ನಮ್ಮ ಕೆಲಸಗಳಿಂದ ಮುನಿದುಕೊಂಡಿದ್ದಾಳೆ. ಅತಿವೃಷ್ಟಿಗೆ ಜೀವಗಳು ಬಲಿಯಾಗಿವೆ. ಅಪಾರವಾದ ಹಾನಿ ಸಂಭವಿಸಿದೆ. ಹಸಿರನ್ನು ಉಳಿಸಿ ಬೆಳೆಸಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ. ದೇಶದ ಒಳಿತಿಗಾಗಿ ನಾವೆಲ್ಲರೂ ಒಂದಾಗಬೇಕು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭ ಸ್ವಾತಂತ್ರ ದಿನಾಚರಣೆ ಪ್ರಯುಕ್ತ ಆಯೋಜಿಸಲಾದ ಭಾಷಣ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿವೇಕಾನಂದ ವಿದ್ಯಾಸಂಸ್ಥೆಗಳಲ್ಲಿ ವಿವಿಧ ಹಂತಗಳಲ್ಲಿ ಈ ಸ್ಪರ್ಧೆಯನ್ನು ನಡೆಸಲಾಗಿದ್ದು, ಪ್ರಥಮ ಬಹುಮಾನವನ್ನು ವಿವೇಕಾನಂದ ಮಹಾವಿದ್ಯಾಲಯದ ಪ್ರಥಮ ಬಿ.ಎಸ್ಸಿ. ವಿದ್ಯಾರ್ಥಿನಿ ಮೈಥಿಲಿ ರಾವ್, ದ್ವಿತೀಯ ಬಹುಮಾನವನ್ನು ದ್ವಿತೀಯ ಬಿ.ಕಾಂ. ವಿದ್ಯಾರ್ಥಿನಿ ಅಂಕಿತಾ ಹಾಗೂ ತೃತೀಯ ಬಹುಮಾನವನ್ನು ದ್ವಿತೀಯ ಎಂ.ಕಾಂ. ವಿದ್ಯಾರ್ಥಿನಿ ರಶ್ಮಿ ಪಡೆದುಕೊಂಡರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ. ಕೃಷ್ಣ ಭಟ್, ನಿರ್ದೇಶಕರುಗಳಾದ ಇ. ಶಿವಪ್ರಸಾದ್, ವಾಮನ ಪೈ, ಕಾರ್ಯನಿರ್ವಹಣಾಧಿಕಾರಿ ಭಾಸ್ಕರ್, ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಶ್ರೀನಿವಾಸ ಪೈ, ಸಂಚಾಲಕ ಜಯರಾಮ ಭಟ್ ಎಂ.ಟಿ., ಕೋಶಾಧಿಕಾರಿ ಸೇಡಿಯಾಪು ಜನಾರ್ಧನ ಭಟ್, ಸದಸ್ಯ ಕೃಷ್ಣ ನಾಯ್ಕ್, ಸದಸ್ಯೆ ಶೋಭಾ ಕೊಳತ್ತಾಯ, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಅಧ್ಯಕ್ಷ ಸತೀಶ್ ರಾವ್, ಸದಸ್ಯ ಮುರಳೀಧರ ಭಟ್, ವಿವೇಕಾನಂದ ಪದವಿಪೂರ್ವ ಕಾಲೇಜಿನ ಅಧ್ಯಕ್ಷ ರವೀಂದ್ರ ಪಿ., ಪಾಲಿಟೆಕ್ನಿಕ್ ಕಾಲೇಜಿನ ಸಂಚಾಲಕ ಮಹದೇವ ಶಾಸ್ತ್ರಿ, ಬೇರೆ ಬೇರೆ ಸಂಸ್ಥೆಗಳ ಆಡಳಿತ ಮಂಡಳಿ ಹಿರಿಯರು, ವಿವಿಧ ಕಾಲೇಜುಗಳ ಪ್ರಾಚಾರ್ಯರು ಉಪಸ್ಥಿತರಿದ್ದರು. ವಿವೇಕಾನಂದ ಪದವಿ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ರೋಹಿಣಾಕ್ಷ ಶಿರ್ಲಾಲು ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪರಸ್ಪರ ರಕ್ಷೆಯನ್ನು ಕಟ್ಟುವ ಮೂಲಕ ರಕ್ಷಾಬಂಧವನ್ನು ಆಚರಿಸಿದರು.