Sunday, November 24, 2024
ಸುದ್ದಿ

ಪ್ರಗತಿ ಸ್ಟಡಿ ಸೆಂಟರ್‍ನಲ್ಲಿ 73ನೇ ಸ್ವಾತಂತ್ರ್ಯೋತ್ಸವ ಆಚರಣೆ : ಸ್ವಾತಂತ್ರೋತ್ಸವದಲ್ಲಿ ಭಾಗವಹಿಸಿದ ಗಿರಿಗಿಟ್ ಚಿತ್ರ ತಂಡ – ಕಹಳೆ ನ್ಯೂಸ್

ಪುತ್ತೂರು : ‘ನಮ್ಮ ಹಿಂದಿನ ಗತವೈಭವಗಳನ್ನು ಮೆಲುಕು ಹಾಕುವ ಬದಲಾಗಿ, ಪ್ರಸಕ್ತ ವಿದ್ಯಮಾನಗಳ ಬಗ್ಗೆ ಗಮನಹರಿಸಿ, ಭ್ರಷ್ಟಾಚಾರ, ಅನ್ಯಾಯ, ಅನಾಚಾರಗಳನ್ನು ಹೋಗಲಾಡಿಸುವ ಬಗೆಯಲ್ಲಿ ವಿದ್ಯಾರ್ಥಿಗಳು ಚಿಂತಿಸುವ ಅವಶ್ಯಕತೆಯಿದೆ ಈ ನಿಟ್ಟಿನಲ್ಲಿ ಅಧ್ಯಾಪಕರುಗಳು, ವಿದ್ಯಾರ್ಥಿಗಳ ಹಾಗೂ ಸಮಾಜದ ಒಳಿತಿಗಾಗಿ ತಮ್ಮ ವಿಚಾರಧಾರೆಗಳನ್ನು ಉಪಯೋಗಿಸಬೇಕು’ ಎಂದು ಮಹಾವೀರ ಆಸ್ಪತ್ರೆಯ ವೈದ್ಯಕೀಯ ತಜ್ಞರಾದ ಡಾ. ಸುರೇಶ್ ಪುತ್ತೂರಾಯ ಪೋಳ್ಯದಲ್ಲಿರುವ ಪ್ರಗತಿ ರೆಸಿಡೆನ್ಸಿಯಲ್ ಸ್ಟಡಿ ಸೆಂಟರ್‍ನಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಮಾಡಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನಂತರ ನಡೆದ ಸಭಾಕಾರ್ಯಕ್ರಮಕ್ಕೆ ದಿಕ್ಸೂಚಿ ಭಾಷಣಗಾರರಾಗಿ ಆಗಮಿಸಿದ ಸುಳ್ಯ ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಹರಿಣಿ ಪುತ್ತೂರಾಯ ಅವರು ಮಾತನಾಡಿ, “ಭಾರತ ಎಂದರೆ ಕೇವಲ ಭೌಗೋಳಿಕ ಕಲ್ಪನೆಯಲ್ಲ ಅದು ದೈವತ್ವದ ಸಂಕೇತ. ಪ್ರಪಂಚದಲ್ಲಿ ಎಲ್ಲೂ ಕಾಣಸಿಗದಂತಹ ಅಪೂರ್ವವಾದ, ಅನೂಹ್ಯವಾದ ಸಂಸ್ಕೃತಿ ನಮ್ಮದು. ಗುರು ಜ್ಞಾನವನ್ನು ನೀಡಿ ಸರಿಯಾದ ಮಾರ್ಗದಲ್ಲಿ ನಡೆಸಿದರೆ, ವಿಶ್ವಗುರು ಇಡೀ ಪ್ರಪಂಚದಲ್ಲಿ ಎಲ್ಲವನ್ನೂ ಸರಿಮಾರ್ಗದಲ್ಲಿ ನಡೆಸುತ್ತಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಗತ್ತಿಗೆ ವಿಶ್ವಗುರುವಾಗುವ ಸ್ಥಾನದಲ್ಲಿರುವ ನಮ್ಮ ಭಾರತ, ಅರ್ಥಶಾಸ್ತ್ರ, ಧರ್ಮಶಾಸ್ತ್ರ, ಶಿಕ್ಷಣಶಾಸ್ತ್ರ ಮತ್ತು ಯೋಗವನ್ನು ಇಡೀ ಜಗತ್ತಿಗೆ ಪರಿಚಯಿಸಿದ ದೇಶ. ಆಚಾರ್ಯ ದೇವೋಭವ, ಪಿತೃದೇವೋಭವ, ಮಾತೃದೇವೋಭವ ಎಂಬುದನ್ನೂ ಕಲಿಸಿಕೊಟ್ಟ ದೇಶ ನಮ್ಮದು. ಇಂದಿನ ಸುದಿನದಂದು ನಾವು ಮೊತ್ತ ಮೊದಲಾಗಿ ತಲೆಬಾಗಿಸಿ ವಂದಿಸಬೇಕಾದುದು ಬಿಸಿಲು-ಮಳೆಯನ್ನು ಲೆಕ್ಕಿಸದೆ ನಮಗೆ ಬೆಂಗಾವಲಾಗಿ ನಿಂತ ಸೈನಿಕರಿಗೆ. ಇಂದು ನಾವು ಒಂದು ಸಂಕಲ್ಪ ಕೈಗೊಳ್ಳಬೇಕಾಗಿದೆ. ಅದೇನೆಂದರೆ ದಿನದ ಹೆಚ್ಚಿನ ಘಂಟೆಗಳಲ್ಲಿ ಸದ್ದಿಲ್ಲದೇ ದುಡಿಯುವವರು ನಾವಾಗಬೇಕು. ಸ್ವಾರ್ಥ, ಅಸೂಯೆ, ದ್ವೇಷ ಇದೆಲ್ಲವನ್ನೂ ಬಿಟ್ಟು ದೇಶವನ್ನು ಕಟ್ಟುವ ಕಾರ್ಯ ನಮ್ಮಿಂದಾಗಬೇಕಾಗಿದೆ. ಪರಸ್ಪರ ಗೌರವಗಳು ಮಾನವ ಸಂಬಂಧಗಳನ್ನು ಉತ್ತಮಗೊಳಿಸುತ್ತವೆ. ‘ನಾನು ಒಳ್ಳೆಯದಾಗುತ್ತೇನೆ, ನಂತರ ನನ್ನ ಜೊತೆಗಿರುವವರು ಒಳ್ಳೆಯದಾಗಬೇಕು, ನನ್ನ ಸಮಾಜ ಒಳ್ಳೆಯದಾಗಬೇಕು’ ಎಂದಾಗ ಖಂಡಿತವಾಗಿಯೂ ದೇಶ ಒಳ್ಳೆಯದಾಗುತ್ತದೆ. ಶಸ್ತ್ರಬಲ ಮತ್ತು ಬುದ್ಧಿಬಲ ಎರಡಿದ್ದರೆ ಸ್ವಾತಂತ್ರ್ಯವನ್ನು ಪಡೆಯಬಹುದು. ಅಂದರೆ ನಾವು ಸಂಪೂರ್ಣವಾಗಿ ವೈಚಾರಿಕವಾಗಿ ಹಾಗೂ ಭೌತಿಕವಾಗಿ ಬೆಳೆದರೆ ದೇಶ ಮತ್ತು ದೇಶದ ಸಂಸ್ಕೃತಿ ಎರಡೂ ಬೆಳೆಯುವುದರಲ್ಲಿ ಸಂದೇಹವಿಲ್ಲ” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಸಂಚಾಲಕ ಪಿ.ವಿ.ಗೋಕುಲ್‍ನಾಥ್ ಮಾತನಾಡಿ, ‘ವಿದ್ಯಾರ್ಥಿಗಳು ಸಂಗಡಿಗರನ್ನು ಆಯ್ಕೆ ಮಾಡಿಕೊಳ್ಳುವಾಗ ಜಾಗೃತರಾಗಿರಿ. ಒಬ್ಬ ವ್ಯಕ್ತಿ ಏನೆಂದು ಅರಿತುಕೊಳ್ಳಬೇಕೆಂದರೆ ಅವನ ಸ್ನೇಹಿತ ಯಾರೆಂದು ತಿಳಿದುಕೊಂಡರೆ ಸಾಕು. ಆಗ ಆತನ ಚರಿತ್ರೆ ತಿಳಿಯುತ್ತದೆ. ಸ್ವಾತಂತ್ರ್ಯ ದಿನಾಚರಣೆ ಎಂಬುದು ಇಂದು ಆಚರಿಸಿ ನಾಳೆ ಮರೆಯುವಂತಹದ್ದಲ್ಲ. ಪ್ರತಿಯೊಬ್ಬ ಅವನ ಕರ್ತವ್ಯವನ್ನು ನಿಷ್ಠೆಯಿಂದ ಮಾಡುವುದು. ಶಿಕ್ಷಕರಿಗೆ ಬೋಧಿಸುವ ಕರ್ತವ್ಯ, ವಿದ್ಯಾರ್ಥಿಗೆ ಕಲಿಯುವ ಕರ್ತವ್ಯ, ಒಬ್ಬ ನಾಗರಿಕನಿಗೆ ದೇಶದ ಹಿತಚಿಂತನೆಯ ಕರ್ತವ್ಯ ಹೀಗೆ ಪ್ರತಿಯೊಬ್ಬರೂ ತಮ್ಮ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿಭಾಯಿಸಿದಾಗ ದೇಶವು ಸುಸೂತ್ರವಾಗಿ ತನ್ನ ಗುರಿಯನ್ನು ಮುಟ್ಟುತ್ತದೆ’ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಅತಿಥಿ ಸ್ಥಾನವನ್ನು ವಹಿಸಿದ್ದ ಪ್ರಗತಿ ಸ್ಟಡಿ ಸೆಂಟರ್‍ನ ಮಾತೃ ಸಂಸ್ಥೆಯ ಪ್ರಾಂಶುಪಾಲರಾದ ಕೆ.ಹೇಮಲತಾ ಗೋಕುಲ್ ಅವರು ಮಾತನಾಡಿ, ‘ವಿದ್ಯಾರ್ಥಿಗಳು ಮುಂದೆ ಸಮಾಜದಲ್ಲಿ ಉತ್ತಮ ಪೌರರಾಗಿ, ಪ್ರಜೆಯಾಗಿ ಬಾಳಬೇಕು. ಎಲ್ಲಿ ತಪ್ಪುಗಳನ್ನು ಗುರುತಿಸುತ್ತಿರೋ ಅಲ್ಲಿಯೇ ಧ್ವನಿಯೆತ್ತಿ, ಅನ್ಯಾಯವನ್ನು ಪ್ರತಿಭಟಿಸಬೇಕು. ಇದು ನಿಮ್ಮ ಹಕ್ಕು. ಇಲ್ಲಿ ವಯಸ್ಸು ಮತ್ತು ಭೌತಿಕತೆ ಲೆಕ್ಕಕ್ಕೆ ಬರುವುದಿಲ್ಲ, ನಿಮ್ಮ ಹಕ್ಕನ್ನು ನೀವು ಚಲಾಯಿಸಿ’ ಎಂದು ನುಡಿದರು.

ಈ ಸಂದರ್ಭದಲ್ಲಿ ‘ಆಷಾಡ ಕೂಟ-ಅಮ್ಮನ ಊಟ’ ಕಾರ್ಯಕ್ರಮದಲ್ಲಿ ಆಯೋಜಿಸಲಾಗಿದ್ದ ದೇಶ ಭಕ್ತಿಗೀತೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಕಾಲೇಜಿನ ಸ್ಮರಣ ಸಂಚಿಕೆ ‘ದಶಪ್ರಣತಿ’ಯನ್ನೂ, ಪ್ರಮಾಣ ಪತ್ರ ಮತ್ತು ನಗದು ಬಹುಮಾನಗಳನ್ನು ವಿತರಿಸಲಾಯಿತು. ಇತರ ಸ್ಪರ್ಧಾಳುಗಳಿಗೂ ಪ್ರಮಾಣ ಪತ್ರ ನೀಡಿ ಪ್ರೋತ್ಸಾಹಿಸಲಾಯಿತು.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ತುಳು ಚಲನಚಿತ್ರ ‘ಗಿರಿಗಿಟ್’ ತಂಡದವರು ಆಗಮಿಸಿ, ವಿದ್ಯಾರ್ಥಿಗಳಿಗೆ ಸಿನಿಮಾದ ಟ್ರೇಲರ್‍ಗಳನ್ನು ಪ್ರದರ್ಶಿಸಿದರು. ನಂತರ ಸಿನಿಮಾದ ಕುರಿತಾಗಿ ನಿರ್ದೇಶಕ ಹಾಗೂ ನಾಯಕ ನಟ ರೂಪೇಶ್ ಶೆಟ್ಟಿ ‘ತುಳು ನಮ್ಮ ಮಾತೃ ಭಾಷೆ, ತುಳು ಚಿತ್ರಗಳನ್ನು ವೀಕ್ಷಿಸಿ ಪ್ರೋತ್ಸಾಹಿಸಬೇಕು. ‘ಗಿರಿಗಿಟ್’ ಸಿನಿಮಾವು ವಿಭಿನ್ನತೆಯನ್ನು ಹೊಂದಿದ್ದು, ಇದರಲ್ಲಿ ಉತ್ತಮ ಕಥಾ ಹಂದರವಿದೆ. ಪ್ರಖ್ಯಾತ ತಾರಗಣವಿದೆ, ನಮ್ಮ ಭಾಷೆಯನ್ನು ನಾವು ಬೆಳೆಸೋಣ’ ಎಂದು ನುಡಿದು ಪ್ರಸ್ತುತ ಸಿನಿಮಾದ ಡೈಲಾಗ್‍ನ್ನು ಹೇಳುವ ಮೂಲಕ ವಿದ್ಯಾರ್ಥಿಗಳನ್ನು ರಂಜಿಸಿದರು. ನಾಯಕಿ ನಟಿ ಶಿಲ್ಪಾ ಶೆಟ್ಟಿ, ನಿರ್ದೇಶಕ ರಾಕೇಶ್ ಕದ್ರಿ, ನೃತ್ಯ ಸಂಯೋಜಕ ನವೀನ್ ಶೆಟ್ಟಿ, ಮತ್ತು ತಂಡ ಸಿನಿಮಾ ಪ್ರಚಾರಕ್ಕೆ ಕೈಜೋಡಿಸಿದರು.

ಉಪನ್ಯಾಸಕಿಯರಾದ ಅಶ್ವಿನಿ ಶೆಟ್ಟಿ ಸ್ವಾಗತಿಸಿ, ಸಂಧ್ಯಾ ವಂದಿಸಿದರು. ರೇಡಿಯೋ ಕಲಾವಿದ ಹಾಗೂ ಉಪನ್ಯಾಸಕರಾದ ಜನಾರ್ಧನ್ ಬೆಟ್ಟಂಪಾಡಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರು, ಹೆತ್ತವರು, ಸಿಬ್ಬಂದಿ ವರ್ಗದವರು, ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.