ವಿವೇಕಾನಂದ ಕಾಲೇಜಿನಲ್ಲಿ ನಿವೃತ್ತರ ಸ್ನೇಹಕೂಟ ಸಮಾರಂಭ: ವಿಶ್ರಾಂತ ಜೀವನ ಬೇಸರ ತಂದಿಲ್ಲ – ಪ್ರೊ. ಎಲ್. ಶ್ರೀಧರ ಭಟ್ – ಕಹಳೆ ನ್ಯೂಸ್
ಪುತ್ತೂರು: ಪ್ರತಿಯೊಬ್ಬ ವ್ಯಕ್ತಿಯು ತನ್ನ ನಿವೃತ್ತಿಯ ನಂತರ ಹೊಸ ಪ್ರವೃತ್ತಿಗಳಲ್ಲಿ ತೊಡಗಿಸಿಕೊಳ್ಳಬೇಕು. ಅದು ಉಪನ್ಯಾಸಕ ವೃತ್ತಿಯಾಗಿರಬಹುದು ಅಥವಾ ಯಾವುದೇ ಉದ್ಯೋಗವಿರಬಹುದು. ನಿವೃತ್ತಿಯ ಅನಂತರದ ಸಮಯವನ್ನು ಸಮಾಜ ಸೇವೆ ಅಥವಾ ಇನ್ನಿತರ ಸಂಘಟನೆಗಳೊಂದಿಗೆ ತೊಡಗಿಸಿಕೊಳ್ಳುವ ಪ್ರವೃತ್ತಿಯನ್ನು ರೂಪಿಸಿದಾಗ ನಿವೃತ್ತಿ ಎಂದಿಗೂ ಬೇಸರ ತರುವುದಿಲ್ಲ. ಅಂತೆಯೇ ಹೊಸ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಜೀವನದ ಮೌಲ್ಯ ಅರಿವಾಗುತ್ತದೆ ಎಂದು ವಿವೇಕಾನಂದ ಕಾಲೇಜಿನ ಹಿಂದಿ ವಿಭಾಗದ ನಿವೃತ್ತ ಮುಖ್ಯಸ್ಥ ಪ್ರೊ.ಎಲ್.ಶ್ರೀಧರ ಭಟ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಸ್ನೇಹಕೂಟ ಸಂಘಟನಾ ಸಮಿತಿಯ ಆಶ್ರಯದಲ್ಲಿ ಕಾಲೇಜಿನ ನಿವೃತ್ತ ಉಪನ್ಯಾಸಕರು ಮತ್ತು ಉಪನ್ಯಾಸಕೇತರರಿಗೆ ಆಯೋಜಿಸಲಾಗಿದ್ದ ನಿವೃತ್ತರ ಸ್ನೇಹಕೂಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘ ಮಹಾನ್ ವಿದ್ಯಾಸಂಸ್ಥೆಯಾಗಿ ಮಾರ್ಪಟ್ಟಿದೆ. ಇಲ್ಲಿನ ಉಪನ್ಯಾಸಕರ ಕೂಟವು ಒಂದು ಪರಿವಾರವಿದ್ದಂತೆ. ಈ ಪರಿವಾರ ಸದಾ ಆನಂದ ಉಂಟುಮಾಡುವಂತಹ ಸಂದರ್ಭಗಳನ್ನು ಸೃಷ್ಟಿಸಿಕೊಂಡು ಬಂದಿದೆ. ಹಾಗಾಗಿ ಇಂದಿನ ಈ ಕಾರ್ಯಕ್ರಮ ಒಂದು ಅರ್ಥಪೂರ್ಣವಾಗಿದೆ ಎಂದರು.
ಉಪನ್ಯಾಸಕ ಜೀವನದ ಅನುಭವ ಹಂಚಿಕೊಂಡ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಡಿ. ಶಿವರಾಮ ಭಟ್ ಮಾತನಾಡಿ, ಆರೋಗ್ಯವೇ ಭಾಗ್ಯ, ನಿವೃತ್ತ ಜೀವನದಲ್ಲಿ ಆರೋಗ್ಯದೆಡೆಗೆ ಹೆಚ್ಚಿನ ಗಮನವನ್ನು ಕೊಡಬೇಕು. ಯೋಗ, ಪ್ರಾಣಾಯಾಮಗಳು ಉತ್ತಮ ಆರೋಗ್ಯ ಕರುಣಿಸುತ್ತದೆ. ಜೀವನದಲ್ಲಿ ಸಮಯಕ್ಕೆ ಹೆಚ್ಚಿನ ಬೆಲೆ ಇದೆ. ಕಾಲೇಜಿನಲ್ಲಿ ಕಳೆದ ಕ್ಷಣಗಳು ಉತ್ತಮ ನೆನಪುಗಳನ್ನು ನೀಡಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ನಿವೃತ್ತ ಉಪನ್ಯಾಸಕರುಗಳಾದ ಪ್ರೊ. ಅಚ್ಯುತ ಭಟ್, ಪ್ರೊ. ಜನಾರ್ಧನ ಭಟ್, ಪ್ರೊ.ರವಿರಾವ್, ಪ್ರೊ.ವಿ.ಬಿ.ಅರ್ತಿಕಜೆ, ಪ್ರೊ.ಪಿ.ಸೂರ್ಯನಾರಾಯಣ, ಪ್ರೊ. ಎ.ವಿ.ನಾರಾಯಣ, ಡಾ.ಹೆಚ್. ಮಾಧವ ಭಟ್, ಪ್ರೊ.ಸುಂದರ ಭಟ್, ಡಾ.ಬಿ.ಶ್ರೀಧರ ಭಟ್, ಪ್ರೊ.ಎಮ್.ಎನ್.ಚೆಟ್ಟಿಯಾರ್, ಪ್ರೊ.ಸುಂದರ ಭಟ್, ಪ್ರೊ.ಎಂ.ಯು.ಪ್ರಭಾಕರ್, ವಾಸುದೇವರಾವ್, ಪ್ರೊ.ವತ್ಸಲಾ, ಸಿ.ಎ. ರಾಮ್‍ಭಟ್ ಮತ್ತು ನಿವೃತ್ತ ಸಿಬ್ಬಂದಿಗಳಾದ ಅನಂತ ಪದ್ಮನಾಭ ಪ್ರಭು, ಸೀತಾರಾಮ ಶೆಣೈ, ಮೋನಪ್ಪ ಶೆಟ್ಟಿ, ಜಗನ್ನಾಥ್, ಪುರುಷೋತ್ತಮ, ನೇಮಣ್ಣ ಗೌಡ, ಆಲ್ಫೆನ್ ರೇಗೋ, ನಾರಾಯಣ.ಕೆ, ಜಯಂತ ಗೌಡ, ಎನ್.ಹೆಚ್.ಸಾವಿತ್ರಿ ಮತ್ತು ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮೊದಲಾದವರು ಉಪಸ್ಥಿತರಿದ್ದರು.