ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ನೂತನ ಸಭಾಂಗಣ ಉದ್ಘಾಟನೆ: ಉನ್ನತ ಶಿಕ್ಷಣದಿಂದ ವ್ಯಕ್ತಿತ್ವಕ್ಕೊಂದು ಪ್ರಬುದ್ಧತೆ – ಡಾ. ಕಲ್ಲಡ್ಕ ಪ್ರಭಾಕರ ಭಟ್- ಕಹಳೆ ನ್ಯೂಸ್
ಪುತ್ತೂರು: ವಿದ್ಯೆ ಎಂಬುವುದು ಕದಿಯಲಾಗದ ಸಂಪತ್ತು. ಯಾವುದೇ ಕಾಲಕ್ಕೂ ಬದುಕನ್ನು ಕಟ್ಟಿಕೊಡಬಲ್ಲ ಆಸ್ತಿ. ಕಲಿಕೆಯ ಬಗ್ಗೆ ಪ್ರೀತಿ ಬೆಳೆಸಿಕೊಂಡಾಗ ವಿಷಯಗಳ ಕುರಿತಾಗಿ ಆಸಕ್ತಿ ತಾನಾಗಿಯೇ ಬೆಳೆಯುತ್ತದೆ. ಕಲಿಯುತ್ತಾ ಹೋದಂತೆ ನಾವು ಬೆಳೆಯುತ್ತಾ ಹೋಗುತ್ತವೆ. ನಮ್ಮ ಬುದ್ಧಿಮತ್ತೆ ಮಾಗುತ್ತ ಸಾಗುತ್ತದೆ. ಉನ್ನತ ಶಿಕ್ಷಣ ವ್ಯಕ್ತಿತ್ವಕ್ಕೆ ಒಂದು ಪ್ರಬುದ್ಧತೆಯನ್ನು ತಂದು ಕೊಡುತ್ತದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಅವರು ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕಾಗಿ ನಿರ್ಮಿಸಲಾದ ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾಸಂಸ್ಥೆ ಕಲಿಕೆಗೆ ಬೇಕಾದ ಭೌತಿಕ ಸೌಕರ್ಯಗಳನ್ನು ಮಾಡಿಕೊಡುತ್ತದೆ. ಆದರೆ ನಾವು ಎಷ್ಟರ ಮಟ್ಟಿಗೆ ಅದನ್ನು ಬಳಸಿಕೊಂಡು ಬೆಳೆಯುತ್ತೇವೆ ಎಂಬುವುದು ನಮಗೆ ಬಿಟ್ಟದ್ದು. ವಿದ್ಯಾರ್ಥಿ ದೆಸೆಯಲ್ಲಿ ನಮ್ಮ ಗಮನ ಕೇವಲ ಶೈಕ್ಷಣಿಕ ಚಟುವಟಿಕೆ ಹಾಗೂ ನಮ್ಮ ಗುರಿಯತ್ತ ಕೇಂದ್ರೀಕೃತವಾಗಿರಬೇಕು. ಜೀವನ ಹಾಳು ಮಾಡುವ ಮಾದಕ ವ್ಯಸನಗಳು, ದುಶ್ಚಟಗಳಿಗೆ ಬಲಿಯಾಗಬಾರದು. ನಮ್ಮ ಬಾಳು ದಾರಿ ತಪ್ಪದಂತೆ ಜಾಗರೂಕತೆ ವಹಿಸುವುದು ನಮ್ಮದೇ ಜವಾಬ್ದಾರಿಯಾಗಿರುತ್ತದೆ. ಕ್ಷಣಿಕ ಸುಖಗಳಿಗೆ ಬಲಿಯಾಗಿ ಸುದೀರ್ಘವಾದ ಬದುಕಿಗೆ ಕೊಳ್ಳಿಯಿಡದಿರಿ ಎಂದು ನುಡಿದರು.
ಈ ಸಂದರ್ಭ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಮುಖವಾಣಿ ‘ಪ್ರಬುದ್ಧ’ವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ. ಕೃಷ್ಣ ಭಟ್ ಬಿಡುಗಡೆಗೊಳಿಸಿದರು.
ಈ ಸಂದರ್ಭ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಶ್ರೀನಿವಾಸ್ ಪೈ, ಸಂಚಾಲಕ ಎಂ.ಟಿ. ಜಯರಾಮ್ ಭಟ್, ಕೋಶಾಧಿಕಾರಿ ಸೇಡಿಯಾಪು ಜನಾರ್ದನ ಭಟ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾ ಅಧಿಕಾರಿ ಭಾಸ್ಕರ್, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ರಾವ್, ಸದಸ್ಯ ಮುರಳೀಧರ್, ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್, ಕಾಲೇಜಿನ ಐಕ್ಯೂಎಸಿ ಸಂಯೋಜಕ ಡಾ. ಶ್ರೀಧರ್ ಹೆಚ್.ಜಿ. ಮೊದಲಾದವರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ರಶ್ಮಿ ಬನಾರಿ ಪ್ರಾರ್ಥಿಸಿ, ಸ್ನಾತಕೋತ್ತರ ವಿಭಾಗಗಳ ಸಂಯೋಜಕಿ ಡಾ. ವಿಜಯ ಸರಸ್ವತಿ ಸ್ವಾಗತಿಸಿ ಪ್ರಸ್ತಾವನೆಗೈದರು. ಕಾಲೇಜಿನ ಪದವಿ ಹಾಗೂ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಾಜೆ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.