ಮಂಡ್ಯ: ಬಿಜೆಪಿ ರಾಜ್ಯಾದ್ಯಂತ ಹಮ್ಮಿಕೊಂಡಿರುವ ನವ ಕರ್ನಾಟಕ ಪರಿವರ್ತನಾ ಯಾತ್ರೆಯಲ್ಲಿ ಪ್ರಪ್ರಥಮ ಬಾರಿಗೆ ಮಾಜಿ ಮುಖ್ಯಮಂತ್ರಿ ಎಸ್‍ಎಂ.ಕೃಷ್ಣ ಭಾಗವಹಿಸಲಿದ್ದಾರೆ.
ಜೆಡಿಎಸ್ ಭದ್ರಕೋಟೆ ಎಂದೇ ಹೆಸರಾದ ಮಂಡ್ಯ ಜಿಲ್ಲೆಯಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಬಿಜೆಪಿಯ ಪರಿವರ್ತನಾ ಯಾತ್ರೆ ನಡೆಯಲಿದೆ. ಮದ್ದೂರು, ಮಂಡ್ಯ, ನಾಗಮಂಗಲ, ಕೆಆರ್ ಪೇಟೆಯಲ್ಲಿ ಪರಿವರ್ತನಾ ಯಾತ್ರೆ ನಡೆಯಲಿದೆ. ಮದ್ದೂರಿನಲ್ಲಿ ನಡೆಯುವ ಬಿಜೆಪಿಯ ಪರಿವರ್ತನಾ ಯಾತ್ರೆಗೆ ಇದೇ ಮೊದಲ ಬಾರಿಗೆ ಎಸ್‍ಎಂ.ಕೃಷ್ಣ ಭಾಗವಹಿಸೋದು ಖಚಿತವಾಗಿದೆ.
ಎಸ್‍ಎಂ.ಕೃಷ್ಣ ಅವರು ಮೂಲತಃ ಮದ್ದೂರಿನ ಸೋಮನಹಳ್ಳಿ ಗ್ರಾಮದವರಾಗಿದ್ದು ರಾಜಕೀಯವಾಗಿ ತಮ್ಮದೇ ಆದ ಪ್ರಭಾವ ಹೊಂದಿದ್ದಾರೆ. ಹೇಗಾದರೂ ಮಾಡಿ ಮಂಡ್ಯದಲ್ಲಿ ತನ್ನ ಖಾತೆ ತೆರೆಯಬೇಕೆಂದು ಹರಸಾಹಸ ಪಡುತ್ತಿರುವ ಬಿಜೆಪಿ, ಅದಕ್ಕಾಗಿ ಎಸ್‍ಎಂ.ಕೃಷ್ಣ ಅವರ ರಾಜಕೀಯ ಪ್ರಭಾವವನ್ನು ಬಳಸಿಕೊಳ್ಳಲು ಹೊರಟಿದೆ.
ಹೀಗಾಗಿ ಇಂದು ಮದ್ದೂರಿನಲ್ಲಿ ನಡೆಯಲಿರುವ ಪರಿವರ್ತನಾ ಯಾತ್ರೆಗೆ, ಎಸ್‍ಎಂ.ಕೃಷ್ಣ ಅವರು ಬರಲೇಬೇಕೆಂದು ಬಿಜೆಪಿಯ ಹಿರಿಯ ನಾಯಕರು ಮನವೊಲಿಸಿದ್ದಾರೆ. ಬಿಜೆಪಿ ನಾಯಕರ ಬೇಡಿಕೆಗೆ ಎಸ್‍ಎಂ.ಕೃಷ್ಣ ಕೂಡ ಒಪ್ಪಿಕೊಂಡಿದ್ದು, ಬಿಜೆಪಿ ವಲಯದಲ್ಲಿ ಸಂತಸಕ್ಕೆ ಕಾರಣವಾಗಿದೆ.
ಗುರುವಾರ ಸಂಜೆ ಕೇಂದ್ರ ಸಚಿವ ವಿಜಯ್ ಗೋಯಲ್ ಎಸ್.ಎಂ.ಕೃಷ್ಣ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ರು. ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವುದರಿಂದ ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗುವಂತೆ ಮನವಿ ಮಾಡಿದ್ದರು.