ಸುಬ್ರಹ್ಮಣ್ಯ ಯೇನೆಕಲ್ಲು ಸರಕಾರಿ ಪ್ರೌಡಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ : ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಂಡ ಡೆವಲ್ಸ್ ಹೆವನ್ ಕ್ಲಬ್‍ನ ಸದಸ್ಯರು – ಕಹಳೆ ನ್ಯೂಸ್
ಸುಬ್ರಹ್ಮಣ್ಯ : ಧಾರಾಕಾರ ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೆ, ಬೆಂಗಳೂರಿನಿಂದ ಬೈಕು ರ‍್ಯಾಲಿ ಮೂಲಕ ಬಂದ ಬೆಂಗಳೂರಿನ ಡೆವಲ್ಸ್ ಹೆವನ್ ಕ್ಲಬ್ ಸದಸ್ಯರು, ದ.ಕ ಜಿಲ್ಲೆಯ ಪುಟ್ಟ ಹಳ್ಳಿ ಯೇನೆಕಲ್ಲು ಸರಕಾರಿ ಪ್ರೌಡಶಾಲೆಯಲ್ಲಿ ನಡೆದ 73ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಅರ್ಥಪೂರ್ಣವಾಗಿ ಸ್ವಾತಂತ್ರ್ಯೋತ್ಸವ ಆಚರಣೆ ನಡೆಸುವುದರ ಜತೆಗೆ ಸಂಭ್ರಮಿಸಿದರು.
ವೃತ್ತಿಯಲ್ಲಿ ಇಂಜಿನೀಯರ್ ಆಗಿರುವ ಯುವಕ ಯವತಿಯರನ್ನು ಒಳಗೊಂಡ 11 ಮಂದಿಯ ಡೆವಲ್ಸ್ ಹೆವನ್ ಕ್ಲಬ್ ಸದಸ್ಯರು ಅತಿಥಿಗಳಾಗಿದ್ದರು. ಕ್ಲಬ್ ಸದಸ್ಯರನ್ನು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಗಣೇಶ್ ಹೂಗುಚ್ಚ ನೀಡಿ ಸ್ವಾಗತಿಸಿದರು.
ಬೆಂಗಳೂರು, ಕೊಡಗು, ದಕ್ಷಿಣ ಭಾರತ ಮೂಲದವರಾಗಿರುವ ಇವರುಗಳು ಬೆಂಗಳೂರಿನಲ್ಲಿ ವಿವಿಧ ಕಂಪೆನಿಗಳಲ್ಲಿ ಇಂಜಿನೀಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹವ್ಯಾಸಿ ಬೈಕು ರೈಡರುಗಳಾಗಿದ್ದಾರೆ. ಡೆವಲ್ಸ್ ಹೆವನ್ ಕ್ಲಬ್ ರಚಿಸಿಕೊಂಡು ಸಮಾಜ ಸೇವೆಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಅದರಂತೆ ತಂಡದ ಸದಸ್ಯರು ಬೆಂಗಳೂರಿನಿಂದ ಮಡಿಕೇರಿ ಮೂಲಕ ಬೈಕುಗಳಲ್ಲಿ ಆಗಮಿಸಿದ್ದರು. ಯೇನೆಕಲ್ಲು ಶಾಲೆಯ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಬೆಳಗ್ಗೆ 8.30ಕ್ಕೆ ಶಾಲೆಗೆ ತಲುಪಿದ ಅವರೆಲ್ಲರೂ ಬಳಿಕ ಶಾಲೆಯಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಬಳಿಕ ಶಾಲಾ ಮಕ್ಕಳಿಗೆ ಶಿಕ್ಷಣಕ್ಕೆ ಅನುಕೂಲವಾಗಲು ಕಲರ್ ಪ್ರಿಂಟರ್ , ಕ್ರೀಡಾ ಸಾಮಾಗ್ರಿ ಹಾಗೂ ಶಾಲೆಯ 60 ಮಂದಿ ವಿದ್ಯಾರ್ಥಿಗಳಿಗೆ ಕಂಪಾಸು ಬಾಕ್ಸ್ ವಿತರಿಸಿದರು.
ನಾವೆಲ್ಲರೂ ವೃತ್ತಿಯಲ್ಲಿ ಇಂಜಿನೀಯರ್ ಆಗಿದ್ದೇವೆ. ಗ್ರಾಮೀಣ ಭಾಗದಲ್ಲಿ ಕಲಿತು ಉದ್ಯೋಗ ಪಡೆದವರು. ನಗರದಲ್ಲಿ ವಾಸವಿದ್ದರೂ ಗ್ರಾಮೀಣ ಭಾಗದ ನಂಟು ಜೀವಂತವಾಗಿರಬೇಕು. ಹಳ್ಳಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು ವಿದ್ಯಾವಂತರಾಗಿ ಉನ್ನತ ಹುದ್ದೆ ಅಲಂಕರಿಸಬೇಕು. ಗಳಿಕೆಯ ಒಂದಷ್ಟು ಅಂಶವನ್ನು ಹಳ್ಳಿಗಳ ಶಾಲೆಗಳಿಗೆ ದಾನ ಮಾಡಬೇಕು ಈ ಉದ್ದೇಶದಿಂದ ಈ ಭಾರಿ ದ.ಕ ಜಿಲ್ಲೆಗೆ ಆಗಮಿಸಿದ್ದೇವೆ. ಭಾರತ ದೇಶದ ಬಹುತೇಕ ಹಳ್ಳಿಗಳಿಗೂ ತೆರಳುತ್ತೇವೆ. ಬೈಕು ರೈಡ್ ಹವ್ಯಾಸ ಮಾತ್ರವಲ್ಲ. ಸಾಮಾಜಿಕ ಕಾಳಜಿಗೂ ಅದು ಬಳಕೆಯಾಗಬೇಕು ಎಂದು ಕ್ಲಬ್ ಮುಖ್ಯಸ್ಥ ಗೌತಮ್ ಕೊಡಗು ಹೇಳಿದರು.
ಮಕ್ಕಳಿಗೆ ಶಾಲೆಯಲ್ಲಿ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕ್ರೀಡಾಸ್ಪರ್ಧೆಯಲ್ಲಿ ಡೆವಲ್ಸ್ ಹೆವನ್ ಕ್ಲಬ್ ಸದಸ್ಯರು ಪಾಲ್ಗೊಂಡರು. ಸ್ವಾತಂತ್ರ್ಯೋತ್ಸವದ ಇಡೀ ದಿನವನ್ನ ಮಕ್ಕಳ ಜತೆಗೆ ಕಳೆದು ಸಂಭ್ರಮಿಸಿದರು.