ಮಂಗಳೂರು: ಸರಕಾರಿ ಅಧಿಕಾರಿಗಳೆಂದರೆ ಧಿಮಾಕಿನಿಂದ ಮಾತನಾಡುವವರು, ತಮ್ಮ ಸ್ವಂತ ಕೆಲಸವನ್ನೂ ಇನ್ನೊಬ್ಬರಿಂದ ಮಾಡಿಸುವವರು ಎಂಬೆಲ್ಲಾ ಅಪವಾದಗಳಿವೆ. ಆದರೆ ಹಲವಾರು ಜನ ಸರಕಾರಿ ಅಧಿಕಾರಿಗಳು ಇದಕ್ಕೆ ಅಪವಾದ ಎಂಬಂತೆ ಇರುತ್ತಾರೆ. ಇತ್ತೀಚೆಗೆ ಬೆಳ್ತಂಗಡಿ ತಾಲೂಕನ್ನು ಕಾಡಿದ ಭಾರೀ ಪ್ರವಾಹದ ಕಾರಣದಿಂದ ಪಶ್ಚಿಮಘಟ್ಟದ ಮಡಿಲಲ್ಲೇ ಇರುವ ಬಂಜಾರು ಮಲೆ ಎಂಬ ಪ್ರದೇಶದ ಸಂಪರ್ಕ ಹೊರಜಗತ್ತಿನೊಂದಿಗೆ ಸಂಪೂರ್ಣ ಕಡಿತಗೊಂಡಿದೆ. ಆ ಭಾಗದಲ್ಲಿ ಹಲವಾರು ಕುಟುಂಬಗಳಿದ್ದು ಇಲ್ಲಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮುರಿದು ಬಿದ್ದಿರುವ ಕಾರಣ ಕಳೆದ ಕೆಲವು ದಿನಗಳಿಂದ ಈ ಭಾಗಕ್ಕೆ ಸಂಪರ್ಕ ಅಸಾಧ್ಯವಾಗಿತ್ತು. ಆದರೆ ಇದೀಗ ಮುರಿದ ಸೇತುವೆಯ ಸ್ಥಳದಲ್ಲಿ ತಾತ್ಕಾಲಿಕ ಸಂಪರ್ಕ ಸೇತುವೆಯನ್ನು ನಿರ್ಮಿಸಲಾಗಿದ್ದು ಇದರ ಮೂಲಕ ಆ ಭಾಗಕ್ಕೆ ಅಗತ್ಯವಿರುವ ಸಾಮಾಗ್ರಿಗಳನ್ನು ಪೂರೈಲಾಗುತ್ತಿದೆ.
ಅದೇ ರೀತಿಯಲ್ಲಿ ಗುರುವಾರದಂದು ಆಹಾರ ಸಾಮಾಗ್ರಿಗಳನ್ನು ಪೂರೈಕೆ ಮಾಡಲಾಯಿತು. ವಿಶೇಷವೆಂದರೆ ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಅವರು ಆಹಾರ ಸಾಮಾಗ್ರಿಗಳನ್ನು ಸ್ವತಃ ತಮ್ಮ ತಲೆಯಲ್ಲಿ ಹೊತ್ತು ಸಾಗಿರುವುದು ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಸೇತುವೆ ಭಾಗದವರೆಗೆ ಸಾಮಾಗ್ರಿಗಳನ್ನು ಟೆಂಪೋ ಮೂಲಕ ಸಾಗಿಸಲಾಯಿತಾದರೂ, ಅಲ್ಲಿಂದ ಮುಂದೆ ಟೆಂಪೋ ಸಾಗದಿರುವ ಕಾರಣ ತಾತ್ಕಾಲಿಕ ಕಾಲು ಸಂಕದ ಮೂಲಕ ಈ ಎಲ್ಲಾ ಸಾಮಾಗ್ರಿಗಳನ್ನು ತಲೆಯಲ್ಲಿ ಹೊತ್ತೊಯ್ಯುವುದು ಅನಿವಾರ್ಯವಾಗಿತ್ತು. ಹೀಗಾಗಿ ಸ್ಥಳೀಯರ ಜತೆ ತಹಶೀಲ್ದಾರ್ ಕೂಡ ಆಹಾರ ಸಾಮಾಗ್ರಿಗಳನ್ನು ಸಾಗಿಸುವುದಕ್ಕೆ ನೆರವಾಗಿದ್ದಾರೆ. ಜತೆಗೆ ತಹಶೀಲ್ದಾರ್ ಅವರಿಗೆ ಅವರ ವಾಹನ ಚಾಲಕ ಸಂತೋಷ್ ಕೂಡ ಸಾಥ್ ನೀಡಿ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾದರು.