ಉಡುಪಿ: ಭಾರತದ ಇತಿಹಾಸಕಾರರ ಮೇಲೆ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ ವಾಗ್ದಾಳಿ ನಡೆಸಿದ್ದಾರೆ.
ಉಡುಪಿಯ ಪಲಿಮಾರುಉ ಪರ್ಯಾಯದ ಎರಡು ವರ್ಷದ ಜ್ಞಾನಯಜ್ಞ ಧಾರ್ಮಿಕ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜಮಹಾರಾಜರು ನಮ್ಮ ದೇಶ ಕಟ್ಟಿಲ್ಲ. ಬ್ರಿಟಿಷ್ ಮನಸ್ಥಿತಿಯ ಇತಿಹಾಸಕಾರರು ಸುಳ್ಳು ಬರೆದಿದ್ದಾರೆ. ನಾವೆಲ್ಲಾ ಸುಳ್ಳು ಓದುತ್ತಿದ್ದೇವೆ. ಭಾರತ ಕಾವಿ ಬಟ್ಟೆಯ ಇತಿಹಾಸ ಹೊಂದಿದೆ. ಈ ಸತ್ಯವನ್ನು ಯಾರು ಒಪ್ಪಿಕೊಳ್ಳಲ್ಲ ಎಂದರು. ಕಾವಿ ತೊಟ್ಟವರು ಹಾಕಿದ ಸನ್ಮಾರ್ಗದಲ್ಲಿ ನಾವು ಬೆಳೆಯಬೇಕು ಎಂದು ಕರೆ ನೀಡಿದರು.
ಮಾತು ಮುಂದುವರೆಸಿದ ಹೆಗಡೆ, ಧರ್ಮ ಏನೆಂದು ತಿಳಿದುಕೊಳ್ಳುವ ಯೋಗ್ಯತೆ ಕೆಲವರಿಗಿಲ್ಲ. ಕೆಲವರು ಪೂಜೆ ಮಾಡೋದನ್ನೇ ಧರ್ಮ ಅಂದ್ಕೊಂಡಿದ್ದಾರೆ. ಯೋಚಿಸುವ ಶಕ್ತಿಯಿಲ್ಲದ ಕೋಪ್ಡಿಗಳ ತಲೆಗೆ ಇದು ಅರ್ಥನೆ ಆಗಲ್ಲ ಎಂದು ಸಿಎಂ ಸಿದ್ದರಾಮಯ್ಯ ಮತ್ತು ಎಡ ಪಂಕ್ತೀಯರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಅವತ್ತೂ ದುರ್ಯೋಧನ ಇದ್ದ, ಇವತ್ತೂ ದುರ್ಯೋ’ಧನ’ ಇದ್ದಾನೆ ಎಂದು ಕಾಳಧನವನ್ನು ದುರ್ಯೋಧನನಿಗೆ ಹೋಲಿಸಿದರು. ಅವತ್ತು ದುಶ್ಯಾಸನ ಇದ್ದ, ಇವತ್ತು ದುಷ್ಟ ಶಾಸನ ಇದೆ. ಕೃಷ್ಣಮಠವನ್ನೇ ಕುಲಗೆಡಿಸಲು ಕೆಲವರು ಬಂದಿದ್ದರು ಎಂದು ಉಡುಪಿ ಚಲೋ ವಿರುದ್ಧ ಗುಡುಗಿದರು. ನಾಸ್ತಿಕರನ್ನು ಧೃತರಾಷ್ಟ್ರನಿಗೆ ಹೋಲಿಸಿದ ಅನಂತಕುಮಾರ್ ಹೆಗಡೆ, ದೇಶದಲ್ಲಿ ಸಮಾನ ನಾಗರೀಕ ಸಂಹಿತೆ ಜಾರಿಗೆ ಬರಬೇಕು. ನೂತನ ಪರ್ಯಾಯ ಪೀಠ ಅಲಂಕರಿಸಿರುವ ಪಲಿಮಾರು ಸ್ವಾಮೀಜಿ ಈ ಬಗ್ಗೆ ಸಂಕಲ್ಪ ಮಾಡಿದ್ದಾರೆ ಎಂದರು.
ಸ್ವಾಮೀಜಿ ಆದೇಶ ಇದ್ದಂತೆ. ಎಷ್ಟೇ ಅಡ್ಡಿ ಆತಂಕ ಅಡೆ ತಡೆ ಬಂದರೂ ನಾನು ಹೆದರುವುದಿಲ್ಲ. ಗುರುವಿನ ಸಂಕಲ್ಪ ತಲೆಮೇಲೆ ಹೊತ್ತು ಕೆಲಸ ಮಾಡುತ್ತೇನೆ ಎಂದರು.
ವರದಿ : ಕಹಳೆ ನ್ಯೂಸ್