ನವದೆಹಲಿ : ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಗೆ ಕೇಂದ್ರ ಸರ್ಕಾರ ಈವರೆಗೂ ಯಾವುದೇ ಪರಿಹಾರವನ್ನು ಘೋಷಿಸಿಲ್ಲ. ಸಚಿವ ಸಂಪುಟ ರಚನೆಯಾಗದೇ ಕೇವಲ ಸಿಎಂ ಮಾತ್ರ ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯದಾದ್ಯಂತ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿರೋಧ ಪಕ್ಷಗಳಿಂದ ಪುಂಖಾನು ಪುಂಖವಾಗಿ ಬಿಜೆಪಿ ಸರ್ಕಾರದ ವಿರುದ್ಧ ಟೀಕೆಗಳು ಕೇಳಿಬರುತ್ತಿವೆ. ಕೇಂದ್ರ ಸರ್ಕಾರದಿಂದ ನೆರವು ತರುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಹರಿಹಾಯುತ್ತಿವೆ. ಈ ಮಧ್ಯೆ ನೆರವು ಘೋಷಿಸದೆ ಮೌನವಾಗದ್ದ ಕೇಂದ್ರ ಸರ್ಕಾರ ಇಂದು ನೆರವು ಘೋಷಿಸುವ ಸಾಧ್ಯತೆ ಇದೆ.
ಸಿಎಂ ಯಡಿಯೂರಪ್ಪ ಅವರು ಎರಡು ದಿನದಿಂದಲೂ ನವದೆಹಲಿಯಲ್ಲಿದ್ದು, ಪ್ರಧಾನಿ ಮೋದಿ ಅವರನ್ನು ನೆರೆ ಸಂತ್ರಸ್ತರಿಗೆ ನೆರವು ನೀಡಲು ಮನವಿ ಮಾಡಿದ್ದಾರೆ. ಪ್ರವಾಹ ಬಂದ ನಂತರ ಯಡಿಯೂರಪ್ಪ ಅವರು ಮೋದಿಯ ಭೇಟಿಯಾಗಿ ನೆರವು ಕೇಳುತ್ತಿರುವುದು ಇದು ಎರಡನೇ ಬಾರಿ.
ಇಂದು ಗೃಹ ಸಚಿವ ಅಮಿತ್ ಶಾ, ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್, ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣೆ ಉನ್ನತ ಮಟ್ಟದ ಅಧಿಕಾರಿಗಳು ಸಭೆ ನಡೆಸಲಿದ್ದು, ಸಭೆಯಲ್ಲಿ ರಾಜ್ಯಕ್ಕೆ ಎಷ್ಟು ನೆರವು ಬಿಡುಗಡೆ ಮಾಡಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ.
ಯಡಿಯೂರಪ್ಪ ಅವರು ಈಗಾಗಲೇ ಪ್ರವಾಹ ಪರಿಸ್ಥಿತಿಯಿಂದ ಆಗಿರುವ ನಷ್ಟದ ಬಗ್ಗೆ ಕೇಂದ್ರಕ್ಕೆ ವರದಿ ನೀಡಿದ್ದಾರೆ. ಅಷ್ಟೆ ಅಲ್ಲದೆ ಅಮಿತ್ ಶಾ ಮತ್ತು ನಿರ್ಮಲಾ ಸೀತಾರಾಮನ್ ಅವರು ಖುದ್ದಾಗಿ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ವೀಕ್ಷಣೆ ಮಾಡಿದ್ದಾರೆ. ಕೇಂದ್ರದಲ್ಲಿ ವಿಶೇಷ ತಂಡವೂ ಒಂದು ರಾಜ್ಯಕ್ಕೆ ಬಂದು ಪ್ರವಾಹ ಸಮೀಕ್ಷೆ ಮಾಡಿದೆ.
ಯಡಿಯೂರಪ್ಪ ಅವರು ಹೇಳಿರುವಂತೆ ಪ್ರವಾಹದಿಂದ ರಾಜ್ಯದಲ್ಲಿ ಸುಮಾರು 40,000 ಕೋಟಿ ನಷ್ಟವಾಗಿದ್ದು, ಈ ಕೂಡಲೇ ಕನಿಷ್ಟ ಮೂರು ಸಾವಿರ ಕೋಟಿ ಅನುದಾನವನ್ನು ಕೇಂದ್ರ ನೀಡಬೇಕು ಎಂದು ಮನವಿ ಮಾಡಿದ್ದರು. ಕೇಂದ್ರ ಸರ್ಕಾರವು ಎಷ್ಟು ನೆರವು ನೀಡಲಿದೆ ಎಂಬುದು ಇಂದು ತಿಳಿಯಲಿದೆ.