ಮಂಗಳೂರು ಪೊಲೀಸ್ ಬೀಟ್ ವ್ಯವಸ್ಥೆಗೆ ಸಾರ್ವಜನಿಕರಲ್ಲಿ ಕೈ ಜೋಡಿಸುವಂತೆ ಮಂಗಳೂರು ಪೊಲೀಸ್ ಕಮಿಷನರ್ ಡಾ| ಪಿ.ಎಸ್.ಹರ್ಷ ಮನವಿ – ಕಹಳೆ ನ್ಯೂಸ್
ಮಂಗಳೂರು: ಮಂಗಳೂರು ನಗರ ಪೊಲೀಸ್ ಆಯುಕ್ತರು ಜಾರಿಗೆ ತಂದ ಹೊಸ ಬೀಟ್ ವ್ಯವಸ್ಥೆಯು ಜನರಿಗೆ ಪಾಸ್‍ಪೋರ್ಟ್, ಉದ್ಯೋಗ ದಾಖಲೆಗಳ ಅಡ್ಡಪರಿಶೀಲನೆ, ತಾವು ನೀಡಿದ ಪ್ರಕರಣಗಳ ತನಿಖಾ ಪ್ರಗತಿ, ತನಿಖಾ ಸಂಬಂಧ ನೋಟಿಸ್ ಮುಂತಾದ ಪೊಲೀಸ್ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸಲು ಸಹಕಾರಿಯಾಗಿದೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಯೋಜನೆಯೊಂದಿಗೆ ಕೈ ಜೋಡಿಸಬೇಕು ಎಂದು ಡಾ| ಹರ್ಷ ಮನವಿ ಮಾಡಿದರು. ಹೊಸ ಬೀಟ್ ವ್ಯವಸ್ಥೆಯ ಮೊದಲ ದಿನವೇ ಪೊಲೀಸ್ ಕಮಿಷನರ್ ಡಾ| ಪಿ.ಎಸ್.ಹರ್ಷ ಅವರು ನಗರದ ಕಂಡತ್‍ಪಳ್ಳಿಯಿಂದ ಮಿಷನ್ ಕಾಂಪೌಂಡ್‍ವರೆಗೆ ಪೊಲೀಸ್ ಸಿಬ್ಬಂದಿ ಜತೆಗೆ ಬೀಟ್ ನಡೆಸಿದರು. ಒಂದು ಬೀಟ್ ಅಂದರೆ ಸುಮಾರು ನಾಲ್ಕೈದು ಮನೆಗಳ ವ್ಯಾಪ್ತಿ ಒಳಗೊಂಡಿರುತ್ತವೆ.
ಸಂಜೆ 4 ಗಂಟೆ ವೇಳೆಗೆ ನಗರದ ಕಂಡತ್‍ಪಳ್ಳಿ ಭಾಗದಿಂದ ಬಂದರ್ ಪೊಲೀಸ್ ಠಾಣಾ ವ್ಯಾಪ್ತಿಯ ಬೀಟ್ ನಂ.8 ರ ಬೀಟ್ ಸಿಬಂದ್ಧಿ ಈಶಪ್ರಸಾದ್ ಜತೆಗೆ ಬೀಟ್ ನಡೆಸಿದರು. ಬೀಟ್ ವೇಳೆ 8-10 ಮನೆಗಳು, ಅಂಗಡಿ ಮುಂಗಟ್ಟು, ಮಸೀದಿ, ಚರ್ಚ್ ಹಾಗೂ ಕುದ್ರೋಳಿ ದೇವಸ್ಥಾನಕ್ಕೆ ಭೇಟಿ ನೀಡಿದರು.
ಭೇಟಿ ನೀಡಿದ ಕಡೆಗಳಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಸಂಭವಿಸಿದ ರಸ್ತೆ ಹಾನಿ, ಕಸದ ರಾಶಿ, ತ್ಯಾಜ್ಯ ವಿಲೇವಾರಿ ಇತ್ಯಾದಿ ಪೊಲೀಸ್ ಇಲಾಖೆಗೆ ನೇರವಾಗಿ ಸಂಬಂಧಪಡದ ವಿಚಾರಗಳ ಬಗ್ಗೆ ನಾಗರಿಕರಿಂದ ದೂರು ವ್ಯಕ್ತವಾಯಿತು.
ಈ ಬಗ್ಗೆ ಪಾಲಿಕೆ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ನಿವಾರಿಸುವ ಭರವಸೆ ನೀಡಿದರು. ಆದರೆ ಸಂಚಾರ, ಕಾನೂನು, ಸುವ್ಯವಸ್ಥೆ ಅಥವಾ ಪೊಲೀಸ್ ಇಲಾಖೆಯ ಬಗ್ಗೆ ಯಾವುದೇ ನೇರ ದೂರು ವ್ಯಕ್ತಗೊಂಡಿಲ್ಲ ಎಂದು ಆಯುಕ್ತರು ತಿಳಿಸಿದ್ದಾರೆ.
‘ನನ್ನ ಗಸ್ತು ನನ್ನ ಹೆಮ್ಮೆ’ ಯೋಜನೆಯಲ್ಲಿ ಕಮಿಷನರೆಟ್ ವ್ಯಾಪ್ತಿಯಲ್ಲಿ 722 ವಾಟ್ಸಪ್ ಗ್ರೂಪ್ ರಚಿಸಲಾಗಿದೆ. ಬೀಟ್ ಸಿಬ್ಬಂದಿಗೆ ಇದಕ್ಕಾಗಿ ಪ್ರತ್ಯೇಕ ಮೊಬೈಲ್ ಸಿಮ್ ಒದಗಿಸಲಾಗಿದೆ. ಈ ಗುಂಪಿನಲ್ಲಿ ಕಾನೂನು, ಸುವ್ಯವಸ್ಥೆಗೆ ಸಂಬಂಧಿಸಿದ ಎಲ್ಲ ವಿಚಾರಗಳನ್ನು ಹಂಚಿಕೊಳ್ಳಲು ಅವಕಾಶ ಇದೆ.
ಅಹಿತಕರ ಘಟನೆ ಅಥವಾ ಇನ್ನಿತರ ತೊಂದರೆಗಳು ಸಂಭವಿಸಿದಾಗ ತತ್‍ಕ್ಷಣಕ್ಕೆ ಗಸ್ತು ವಾಹನ, ಬೀಟ್ ಸಿಬ್ಬಂದಿ ಕಳುಹಿಸಿ ನಿಜಾಂಶಗಳನ್ನು ಕಂಡುಕೊಳ್ಳಲು ಸುಲಭ ವಾಗಲಿದೆ. ಅಲ್ಲದೆ ಜನತೆಗೂ ತಪ್ಪು ಮಾಹಿತಿ ರವಾನೆಯಾಗದಂತೆ ಗ್ರೂಪ್‍ಗಳಲ್ಲಿ ಸಂದೇಶಗಳನ್ನು ಅಪ್‍ಡೇಟ್ ಮಾಡಲಾಗುತ್ತದೆ. ಇದು ಏಕಕಾಲದಲ್ಲಿ ಲಕ್ಷಾಂತರ ನಾಗರಿಕರನ್ನು ತಲುಪಲು ಸಾಧ್ಯವಿದೆ. ಸಾರ್ವಜನಿಕರು ವಾಟ್ಸಪ್ ನಂಬರ್‍ಗೆ 9480802300 ಮಾಹಿತಿ ನೀಡಬಹುದು.
ಒಂದು ತಿಂಗಳಲ್ಲಿ ಹೊಸ ಆ್ಯಪ್ ಕೂಡ ಬರಲಿದೆ. ಆಸಕ್ತರು ಇದಕ್ಕೆ ಲಾಗಿನ್ ಆಗಿ ಬೀಟ್ ಪೊಲೀಸರ ಜತೆ ಸೇವೆ ಮಾಡಬಹುದು. ಸೀಮಿತ ಸಂಖ್ಯೆಯ ಪೊಲೀಸರು ಇರುವುದರಿಂದ ಇಂತಹ ಯೋಜನೆ ಮೂಲಕ ಸಮಾಜದಲ್ಲಿ ಶಾಂತಿ, ಸೌಹಾರ್ದಕ್ಕೂ ಉಪಯುಕ್ತವಾಗಲಿದೆ ಎಂದು ಡಾ| ಪಿ.ಎಸ್. ಹರ್ಷ ವಿವರಿಸಿದರು.