ತುಮಕೂರು: ಬಾಂಬೆಯಿಂದ ಮೈಸೂರಿಗೆ ಆಯಿಲ್ ತೆಗೆದುಕೊಂಡು ಹೋಗುತ್ತಿದ್ದ ಟ್ಯಾಂಕರ್ ಲಾರಿ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಅಪ್ಪಳಿಸಿದಾಗ ಸಂಭವಿಸಿದ ಶಾರ್ಟ್ ಸಕ್ರ್ಯೂಟ್ನಿಂದ ಬೆಂಕಿ ಹೊತ್ತಿಕೊಂಡು ಸುಟ್ಟು ಭಸ್ಮವಾದ ಘಟನೆ ಚೇಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಚಾಲಕ ಮೊಹಮದ್ ಫೈಗನ್ ಗಾಯಗೊಂಡಿದ್ದು , ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುಂಬೈನಿಂದ ಮೈಸೂರಿಗೆ ಆಯಿಲ್ ತೆಗೆದುಕೊಂಡು ಟ್ಯಾಂಕರ್ ಲಾರಿ ಶಿರಾ-ಚೇಳೂರು-ನಿಟ್ಟೂರು-ಮೈಸೂರು ಮಾರ್ಗದ ಮೂಲಕ ಹೋಗುತ್ತಿದ್ದಾಗ ಇಂದು ಮುಂಜಾನೆ 5.30ರ ಸುಮಾರಿಗೆ ಸೋಮಲಾಪುರ ಸಮೀಪದ ತೋಟದ ಪಾಳ್ಯ ಬಳಿ ಚಾಲಕನ ನಿಯಂತ್ರಣ ತಪ್ಪಿ ವಾಹನದ ಬಲ ಭಾಗಕ್ಕೆ ಹೋಗಿ ವಿದ್ಯುತ್ ಕಂಬಕ್ಕೆ ಅಪ್ಪಳಿಸಿದೆ.
ಪರಿಣಾಮವಾಗಿ ಟ್ಯಾಂಕರ್ ನಲ್ಲಿದ್ದ ಆಯಿಲ್ ಸೋರಿಕೆಯಾಗಿದ್ದು, ಇದೇ ವೇಳೆ ಶಾರ್ಟ್ ಸಕ್ರ್ಯೂಟ್ನಿಂದಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಲಾರಿ ಸಂಪೂರ್ಣ ಹೊತ್ತಿ ಉರಿದಿದೆ. ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಾಗ ಚಾಲಕ ಕೆಳಗೆ ಬಿದ್ದಿದ್ದರಿಂದ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.