ಉಡುಪಿ : ಕಣ್ಣುಹಾಯಿಸಿದಲೆಲ್ಲಾ ಜನಸಾಗರ, ಸಾಂಸ್ಕೃತಿಕ ಕಲಾವೈಭವ, ಕೃಷ್ಣಂ ವಂದೇ ಜಗದ್ಗುರು ಎನ್ನುವ ಭಕ್ತರ ಉದ್ಘೋಷದ ನಡುವೆ, ಪಲಿಮಾರು ಹೃಷಿಕೇಶ ಮಠ ಸಂಸ್ಥಾನದ ಮೂವತ್ತನೇ ಯತಿ ವಿದ್ಯಾಧೀಶ ತೀರ್ಥ ಶ್ರೀಗಳು ಎರಡನೇ ಬಾರಿಗೆ ಉಡುಪಿ ಶ್ರೀಕೃಷ್ಣ ಮಠದ ಸರ್ವಜ್ಞ ಪೀಠವನ್ನೇರಿದ್ದಾರೆ.
ಗುರುವಾರ (ಜ 18) ಹೇಮಲಂಬಿ ಸಂವತ್ಸರದ ಮಾಘ ಮಾಸ ಶುಕ್ಲ ಪಾಡ್ಯದ ದಿನದಂದು, ನಸುಕಿನ ಎರಡು ಗಂಟೆಗೆ ಆರಂಭವಾದ ಪರ್ಯಾಯ ಪೂಜಾ ವಿಧಿವಿಧಾನಗಳನ್ನು ಮುಗಿಸಿಕೊಂಡು, ಭವ್ಯ ಮೆರವಣಿಗೆಯ ಮೂಲಕ ರಥಬೀದಿಗೆ ಆಗಮಿಸಿದ ಪಲಿಮಾರು ಶ್ರೀಗಳನ್ನು ದಾಖಲೆ ಐದನೇ ಬಾರಿಗೆ ಯಶಸ್ವಿಯಾಗಿ ಪರ್ಯಾಯವನ್ನು ಮುಗಿಸಿರುವ ಪೇಜಾವರ ಹಿರಿಯ ಮತ್ತು ಕಿರಿಯ ಶ್ರೀಗಳು ಕೃಷ್ಣಮಠಕ್ಕೆ ಸ್ವಾಗತಿಸಿದರು.
ಇದಕ್ಕೂ ಮೊದಲು, ಉಡುಪಿ ಹೊರವಲಯದ ದಂಡತೀರ್ಥದಲ್ಲಿ ನಸುಕಿನ 2.10ಕ್ಕೆ ಪುಣ್ಯಸ್ನಾನ ಪೂರೈಸಿ ನಗರಕ್ಕೆ ಆಗಮಿಸಿದ ಪಲಿಮಾರು ಶ್ರೀಗಳು, ಜೋಡುಕಟ್ಟೆ ವೃತ್ತದಲ್ಲಿರುವ ಮಂಟಪದಲ್ಲಿ ಪಟ್ಟದ ದೇವರಿಗೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಇತಿಹಾಸದ 249ನೇ ಪೀಠಾರೋಹಣ ಮಹೋತ್ಸವ ಧಾರ್ಮಿಕ ಮುಖಂಡರು, ಅಷ್ಠ ಮಠದ ಇತರ ಯತಿಗಳು. ಸಾವಿರಾರು ಭಕ್ತರು ಮತ್ತು ಜನಪ್ರತಿನಿಧಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ಸಾಗಿತು.
ಅಷ್ಠಮಠದ ಯತಿಗಳು ಸಾಂಪ್ರದಾಯಿಕ ಪಲ್ಲಕ್ಕಿಯಲ್ಲಿ ಮೆರವಣಿಗೆಯಲ್ಲಿ ಬಂದರು. ತಟ್ಟಿರಾಯ, ಹುಲಿ ವೇಷ ಕುಣಿತ, ನಗಾರಿ, ಡೊಳ್ಳುಕುಣಿತ, ವೀರಗಾಶೆ, ಸೃಷ್ಟಿಗೊಂಬೆ ಬಳಗ, ಚಿಲಿಪಿಲಿ ಗೊಂಬೆ, ಮಹಿಳಾ ಚೆಂಡೆ, ಕೇರಳದ ಚೆಂಡೆ, ಸಿಂಗಾರಿ ಮೇಳ, ನಂದಿಧ್ವಜ ಮುಂತಾದ ಸಾಂಸ್ಕೃತಿಕ – ಕಲಾ ವೈಭವ ಮೆರವಣಿಗೆಯಲ್ಲಿ ಸಾಗಿ ಬಂತು.
ನವಗ್ರಹ ಕಿಂಡಿಯ ಮೂಲಕ ದೇವರ ದರ್ಶನ ಪಡೆದ ನಂತರ 6.42ಕ್ಕೆ ಪೇಜಾವರ ಹಿರಿಯ ಮತ್ತು ಕಿರಿಯ ಶ್ರೀಗಳು ಪಲಿಮಾರು ಶ್ರೀಗಳಿಗೆ ಅಕ್ಷಯಪಾತ್ರೆ ಮತ್ತು ಸಟ್ಟುಗವನ್ನು ಹಸ್ತಾಂತರಿಸಿದರು. ಆ ನಂತರ ಪಟ್ಟದದೇವರಿಗೆ ಪೂಜೆ ಸಲ್ಲಿಸಿದ ನಂತರ 6.50ಕ್ಕೆ ಸರ್ವಜ್ಞ ಪೀಠವನ್ನೇರಿದರು.
6.55 ಬಡಗುಮಾಳಿಗೆಯ ಅರಳುಗದ್ದಿಗೆಯಲ್ಲಿ ಅಷ್ಠಮಠಾಧೀಶರ ಸಮ್ಮುಖದಲ್ಲಿ (ಪುತ್ತಿಗೆ ಶ್ರೀಗಳನ್ನು ಹೊರತು ಪಡಿಸಿ) ವಿವಿಧ ಪರ್ಯಾಯ ವಿಧಿವಿಧಾನಗಳು ನಡೆಯುತು. ಇದಾದ ನಂತರ ರಾಜಾಂಗಣದ ಆನಂದತೀರ್ಥ ಮಂಟಪದಲ್ಲಿ ಪರ್ಯಾಯ ದರ್ಬಾರ್ ಆರಂಭವಾಯಿತು.
ವರದಿ : ಕಹಳೆ ನ್ಯೂಸ್